ಕಾರವಾರ : ಉತ್ತರಕನ್ನಡದಲ್ಲಿ ಭಾರಿ ಮಳೆಯಾಗುತ್ತಿದ್ದು, ಪ್ರವಾಹ ಉಂಟಾಗಿದೆ. ಗಂಗಾವಳಿ ನದಿ ಪ್ರವಾಹದಿಂದಾಗಿ ಹೋಟೆಲ್‌ನಲ್ಲಿ ಸಿಲುಕಿಕೊಂಡವರನ್ನು ಹೆಲಿಕಾಪ್ಟರ್ ಮೂಲಕ ಏರ್‌ಲಿಫ್ಟ್ ಮೂಲಕ ರಕ್ಷಣೆ ಮಾಡಿರುವ ಘಟನೆ ಅಂಕೋಲಾದ ಸುಂಕಸಾಳದಲ್ಲಿ ನಡೆದಿದೆ.
ಗಂಗಾವಳಿ ನದಿಯ ಪ್ರವಾಹದಿಂದಾಗಿ ಸುಂಕಸಾಳ ಬಳಿಯ ನವಮಿ, ಐಲ್ಯಾಂಡ್ ಹೋಟೆಲ್‌ನಲ್ಲಿ ಸಿಲುಕಿದ್ದವರನ್ನು ರಕ್ಷಿಸಲು ಬೋಟ್ ಮೂಲಕ ತೆರಳಲು ಸಾಧ್ಯವಾಗಲಿಲ್ಲ. ಈ ಸಂಬಂಧ ನೌಕಾನೆಲೆಯ ಹೆಲಿಕಾಪ್ಟರ್ ಅನ್ನು ರಕ್ಷಣಾ ಕಾರ್ಯಕ್ಕೆ ಬಳಸಲು ಅನುಮತಿಗೆ ಜಿಲ್ಲಾಡಳಿತ ಮನವಿ ಮಾಡಿತ್ತು. ಅದರಂತೆ ಹೋಟೆಲ್‌ನಲ್ಲಿ ಜಲಬಂಧಿಯಾಗಿದ್ದ ಮಹಿಳೆಯರು, ಮಕ್ಕಳು ಸೇರಿ 15 ಮಂದಿಯನ್ನು ಹೆಲಿಕಾಪ್ಟರ್ ಮೂಲಕ ಏರ್‌ಲಿಫ್ಟ್ ಮಾಡಿ ರಕ್ಷಣೆ ಮಾಡಲಾಗಿದೆ.
ರಾಷ್ಟ್ರೀಯ ಹೆದ್ದಾರಿ 63ರಲ್ಲಿ ಗಂಗಾನದಿ ಉಕ್ಕಿ ಹರಿದಿದ್ದ ಕಾರಣ ಹೆದ್ದಾರಿ ಬಂದ್ ಆಗಿ ಹೋಟೆಲ್‌ನಲ್ಲಿ ಆಶ್ರಯ ಪಡೆದಿದ್ದರು. ಅಲ್ಲದೆ ಹೋಟೆಲ್ ಸಿಬ್ಬಂದಿ ಸೇರಿ 15 ಮಂದಿಯ ರಕ್ಷಣೆ ಮಾಡಿ ನೌಕಾನೆಲೆಯ ಹೆಲಿಪ್ಯಾಡ್ನಲ್ಲಿ ಇಳಿಸಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.
ಹೆದ್ದಾರಿ ಸಂಚಾರ ಬಂದ್ : ನೀರಿನಲ್ಲಿ ಸಿಲುಕಿದವರ ರಕ್ಷಣೆಗೆ ಹರಸಾಹಸ
ಗಂಗಾವಳಿ ನದಿ ಪ್ರವಾಹದಿಂದಾಗಿ ಅಂಕೋಲಾದ ಹೊನ್ನಾಳಿ ಸೇರಿ ಹಲವು ಗ್ರಾಮಗಳು ಸಂಪೂರ್ಣ ಮುಳುಗಡೆಯಾಗಿವೆ. ಈ ಭಾಗದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 63ರಲ್ಲಿ ಎದೆಮಟ್ಟದಲ್ಲಿ ನೀರು ತುಂಬಿಕೊಂಡಿದ್ದು, ವಾಹನಗಳ ಸಂಚಾರ ಸ್ಥಗಿತಗೊಂಡಿದೆ. ಜಿಲ್ಲೆಯಲ್ಲಿ ಎಡಬಿಡದೆ ಸುರಿದ ಮಳೆಯಿಂದಾಗಿ ಗಂಗಾವಳಿ,ಕಾಳಿ,ಅಘನಾಶಿನಿ ನದಿಗಳು ಉಕ್ಕಿ ಹರಿಯಲಾರಂಭಿಸಿವೆ.
ಪ್ರವಾಹದಿಂದಾಗಿ ಅಂಕೋಲಾ, ಯಲ್ಲಾಪುರ, ಹುಬ್ಬಳ್ಳಿ ಮಾರ್ಗ ಸಂಪೂರ್ಣ ಬಂದ್ ಆಗಿದೆ. ಈ ಭಾಗದ ಹೊನ್ನಳ್ಳಿ, ಸುಂಕಸಾಳ, ರಾಮನಗುಳಿ ಸೇರಿ ಹತ್ತಾರು ಗ್ರಾಮಗಳು ಸಂಪೂರ್ಣ ಜಲಾವೃತಗೊಂಡಿವೆ. ಈ ಭಾಗದಲ್ಲಿ ಸಿಲುಕಿರುವ ಜನರನ್ನು ಸುರಕ್ಷಿತ ಸ್ಥಳಗಳಿಗೆ ಬೋಟ್ಗಳ ಮೂಲಕ ಶಿಫ್ಟ್ ಮಾಡಲಾಗುತ್ತಿದೆ.
ಇನ್ನು, ಘಟ್ಟದ ಮೇಲ್ಭಾಗದ ಯಲ್ಲಾಪುರ, ಶಿರಸಿ, ಹಳಿಯಾಳ ಭಾಗದಲ್ಲಿ ಮಳೆ ಹೆಚ್ಚಿದ್ದರಿಂದ ಪ್ರವಾಹ ಸ್ಥಿತಿ ನಿರ್ಮಾಣವಾಗಿದೆ. ಕಾರವಾರ, ಅಂಕೋಲಾ, ಕುಮಟಾ ಭಾಗದಲ್ಲಿ ಜನಜೀವನ ಅಸ್ತವ್ಯಸ್ತವಾಗಿದೆ.
ಘಟನಾ ಸ್ಥಳಕ್ಕೆ ಕಾರವಾರ-ಅಂಕೋಲಾ ಶಾಸಕಿ ರೂಪಾಲಿ ನಾಯ್ಕ್ ಭೇಟಿ ನೀಡಿದ್ದು, ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವ ಬಗ್ಗೆ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದಾರೆ.
ಓದಿ: ಉತ್ತರ ಕನ್ನಡದಲ್ಲಿ ಭಾರೀ ಮಳೆ, ಪ್ರವಾಹದಿಂದ ಮನೆಗಳು ಮುಳುಗಡೆ: ಪ್ರತ್ಯಕ್ಷ ವರದಿ ನೋಡಿ..