ಕಾರವಾರ: ಕರಾವಳಿಯಲ್ಲಿ ಸುರಿದ ಭಾರಿ ಮಳೆಯಿಂದಾಗಿ ನೆರೆಹಾವಳಿ ಸೃಷ್ಟಿಯಾಗಿದ್ದು, ಜನರ ಸುರಕ್ಷತೆ ದೃಷ್ಟಿಯಿಂದಾಗಿ ಒಟ್ಟು ಐದು ಕಡೆ ಗಂಜಿ ಕೇಂದ್ರ ತೆರೆಯಲಾಗಿದೆ.

ಹೊನ್ನಾವರ ತಾಲೂಕಿನ ಕರ್ಕಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಭಾಸ್ಕೇರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಹಳದೀಪುರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಲ್ಕಟ್ಟಿಯಲ್ಲಿ ತಲಾ ಒಂದು ಹಾಗೂ ಕಡತೋಕಾದ ಕೆಕ್ಕಾರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎರಡು ಗಂಜಿ ಕೇಂದ್ರ ಸ್ಥಾಪನೆ ಮಾಡಲಾಗಿದೆ.
ಹೊನ್ನಾವರ ನೆರೆಹಾವಳಿಯಿಂದ ತೊಂದರೆಗೊಳಗಾದ ಒಟ್ಟು 78 ಕುಟುಂಬಗಳ 181 ಜನರನ್ನು ಗಂಜಿ ಕೇಂದ್ರಗಳಿಗೆ ಸ್ಥಳಾಂತರ ಮಾಡಲಾಗಿದ್ದು, ಊಟೋಪಹಾರ ಹಾಗೂ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ. ಕುಮಟಾ ತಾಲೂಕಿನ ಕೆಲ ಭಾಗದಲ್ಲೂ ಅತೀ ಹೆಚ್ಚು ಮಳೆಯಾಗಿದೆ.
ಕೋನಳ್ಳಿ ಗ್ರಾಮ, ಹಿರೇಕಟ್ಟು, ಮಜಿರೆಯ 35 ಕುಟುಂಬದ 200, ಉರಕೇರಿ ಗ್ರಾಮದ ಗುಮ್ಮನಗುಡಿಯ 27 ಕುಟುಂಬದ 110 ಜನರನ್ನು ಆಯಾ ಭಾಗದ ಗಂಜಿ ಕೇಂದ್ರದಲ್ಲಿ ಸ್ಥಳಾಂತರ ಮಾಡಲಾಗಿದೆ. ಜನರನ್ನು ನಾಲ್ಕು ದೋಣಿಯ ಸಹಾಯದಿಂದ ಸುರಕ್ಷಿತ ಪ್ರದೇಶಕ್ಕೆ ಸಾಗಿಸಲಾಗಿದೆ.