ಕಾರವಾರ: ಹಳಿಯಾಳ ಗೃಹರಕ್ಷಕ ದಳದಲ್ಲಿ ಭ್ರಷ್ಟಾಚಾರ ನಡೆಸುತ್ತಿರುವ ಮೇಲಾಧಿಕಾರಿಯೊಬ್ಬರು ತಮಗೆ ನಿರಂತರ ಕಿರುಕುಳ ನೀಡುತ್ತಿರುವುದಾಗಿ ಗೃಹ ರಕ್ಷಕ ದಳದ ಸಿಬ್ಬಂದಿ ಗಂಭೀರ ಆರೋಪ ಮಾಡಿದ್ದಾರೆ.
ಹಳಿಯಾಳ ಗೃಹ ರಕ್ಷಕ ದಳದ ಪ್ರಭಾರ ಘಟಕಾಧಿಕಾರಿಯಾಗಿರುವ ರವಿ ಮಿರಜಕರ ವಿರುದ್ಧ ಇಂತಹದೊಂದು ಆರೋಪ ಕೇಳಿ ಬಂದಿದೆ. ಇವರ ವಿರುದ್ಧ ಗೃಹ ರಕ್ಷಕ ದಳದ ಸಿಬ್ಬಂದಿಯಾದ ನಾಗರಾಜ ಕೃಷ್ಣಾ ನಿರಂಜನ ಮತ್ತು ಶ್ರೀನಿವಾಸ ಲಕ್ಷ್ಮಣ ಉಪ್ಪಾರ ಜಿಲ್ಲಾ ಸಮಾದೇಷ್ಟರಿಗೆ ಲಿಖಿತ ದೂರು ನೀಡಿದ್ದಾರೆ.
ಹಳಿಯಾಳ ಘಟಕದ ಪ್ರಭಾರ ಘಟಕಾಧಿಕಾರಿಯಾಗಿರುವ ರವಿ ಮಿರಜಕರ ಅವರು ಹಿರಿಯ ಸಿಬ್ಬಂದಿಗೆ ಗೌರವ ಕೊಡುವುದಿಲ್ಲ. ಸಾರ್ವಜನಿಕವಾಗಿ ತಾವೇ ಪೊಲೀಸ್ ಸಿಬ್ಬಂದಿಯಂತೆ ವರ್ತಿಸುತ್ತಾರೆ. ಕೆಲಸ ನೀಡಲು ಹಣ ಕೇಳುತ್ತಾರೆ. ಮಾಡದೇ ಇರುವ ಕೆಲಸದ ಹಣವನ್ನು ನಮ್ಮ ಹೆಸರಿನಲ್ಲಿ ತೆಗೆದು ಭ್ರಷ್ಟಾಚಾರ ನಡೆಸುತ್ತಿರುವುದಾಗಿ ಗಂಭೀರ ಆರೋಪ ಮಾಡಿದ್ದಾರೆ.
ಈ ಬಗ್ಗೆ ಈಗಾಗಲೇ ಹಲವು ಬಾರಿ ಹಿರಿಯ ಅಧಿಕಾರಿಗಳಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಪ್ರಭಾರ ಘಟಕಾಧಿಕಾರಿ ರವಿ ಮಿರಜಕರ ವರ್ತನೆಯ ಕುರಿತು ಈಗಾಗಲೇ ಹಳಿಯಾಳ ಗೃಹ ರಕ್ಷಕ ಘಟಕದ 13 ಸಿಬ್ಬಂದಿ ಜಿಲ್ಲಾ ಪಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು ಅವರಿಗೆ ಲಿಖಿತ ದೂರು ಸಲ್ಲಿಸಿದ್ದಾರೆ. ಆದರೆ, ಈವರೆಗೂ ಯಾವುದೇ ಕ್ರಮ ಆಗಿಲ್ಲ. ಇದೀಗ ಅವರು ಮತ್ತೆ ನಮ್ಮ ಮೇಲೆ ದ್ವೇಷ ಸಾಧನೆ ಮಾಡುತ್ತಿದ್ದು, ನಮಗೆ ಕೆಲಸ ನೀಡದೆ ಸತಾಯಿಸುತ್ತಿದ್ದಾರೆ ಎಂದಿದ್ದಾರೆ.