ಉಡುಪಿ : ಪವನ ಪುತ್ರ ಹನುಮಂತನ ಆಶೀರ್ವಾದ ಬಲಫಲ ಸ್ವರೂಪವಾಗಿ ಗುರುತಿಸಿಕೊಂಡಿರುವ ಸಾಲಿಗ್ರಾಮದಲ್ಲಿ ಹನುಮ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಅದರಲ್ಲೂ ಇಲ್ಲಿ ನೀಡುವ ಇಪ್ಪತ್ತು ಬಗೆಯ ಪ್ರಸಾದವಂತೂ ಬಲು ಶ್ರೇಷ್ಠ. ಜಿಲ್ಲೆಯ ನಾನಾಕಡೆಯಿಂದ ಬಂದ ಭಕ್ತರು ಪ್ರಸಾದ ಸ್ವೀಕರಿಸಿದರು.
ಸಾಲಿಗ್ರಾಮದ ಹನುಮ ಜಯಂತಿ ವಿಶೇಷ:
ತನ್ನ ದೇವರಾದ ಶ್ರೀರಾಮಚಂದ್ರನ ಸೇವೆ ಮತ್ತು ಸ್ವಾಮಿ ಭಕ್ತಿಯಿಂದಲೇ ಹೆಸರುವಾಸಿಯಾದ ಹನುಮಂತ ಧೈರ್ಯ-ಶಕ್ತಿಯ ಸಾಕಾರಮೂರ್ತಿ. ಅದರಲ್ಲೂ ಸಾಲಿಗ್ರಾಮದ ಶ್ರೀ ಆಂಜನೇಯ ದೇವರಂತೂ ಜಿಲ್ಲೆಯಲ್ಲಿಯೇ ವಿಶೇಷವಾಗಿ ಗುರುತಿಸಿಕೊಂಡಿದ್ದಾರೆ. ಉಗ್ರ ಸ್ವರೂಪ ಶ್ರೀ ಗುರು ನರಸಿಂಹನ ಉಗ್ರ ರೂಪದಿಂದ ಊರನ್ನು ರಕ್ಷಿಸಿರುವ ಇಲ್ಲಿನ ಶ್ರೀ ಆಂಜನೇಯ ಸುತ್ತಮುತ್ತಲಿನ ಭಕ್ತರನ್ನು ಕೂಡ ರಕ್ಷಿಸುತ್ತಾ ಬಂದಿದ್ದಾರೆ ಎಂಬುದು ಇಲ್ಲಿಗೆ ಬರುವ ಭಕ್ತರ ನಂಬಿಕೆ. ಹೀಗಾಗಿ ಹನುಮ ಜಯಂತಿಯಂದು ಸಾಲಿಗ್ರಾಮದ ಪರಿಸರದಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಿ ಸಹಸ್ರಾರು ಮಂದಿ ಭಕ್ತರು ಶ್ರೀ ದೇವರ ದರ್ಶನ ಪಡೆದರು.
ಪ್ರತಿ ವರ್ಷವು ಕೂಡ ಸಾಲಿಗ್ರಾಮದ ಶ್ರೀಆಂಜನೇಯ ದೇವಸ್ಥಾನದ ಹನುಮ ಜಯಂತಿಯ ಉತ್ಸವಕ್ಕೆ ಮೆರಗು ನೀಡುತ್ತಾ ಬಂದವರು ಶ್ರೀ ಆಂಜನೇಯ ಸೇವಾ ಸಮಿತಿಯ ಸದಸ್ಯರು. ಹನುಮ ಜಯಂತಿಯಂದು ಸೇವಾ ಸಮಿತಿಯ ಸದಸ್ಯರು ತಮ್ಮ ವೃತ್ತಿಗೆ ರಜೆ ಘೋಷಿಸಿ ಹಿಂದಿನ ದಿನವೇ ದೇವಸ್ಥಾನ ಶುಚಿತ್ವ ಮಾಡಿ ವಿಶೇಷ ಹೂವಿನ ಅಲಂಕಾರ ಮಾಡುತ್ತಾರೆ. ಸಂಜೆಯ ವೇಳೆಗೆ ಸುಮಾರು ೧೦೦ ಸದಸ್ಯರು ಸಂಜೆಯ ವಿಶೇಷ ಪ್ರಸಾದ ವಿತರಣೆಗೆ ಬೇಕಾದ ವ್ಯವಸ್ಥೆಗಳನ್ನು ದೇವಸ್ಥಾನದ ಬಳಿ ಮಾಡಿಕೊಳ್ಳುತ್ತಾರೆ. ದೇವರಿಗೆ ಸೇವೆ ರೂಪದಲ್ಲಿ ನೀಡಲಾಗುವ ಹಲವಾರು ಬಗೆಯ ಟನ್ ಗಟ್ಟಲೆ ಹಣ್ಣು, ಹಾಲು, ಜೇನು ತುಪ್ಪದಿಂದ ಮಾಡಿದ ಫ್ರೂಟ್ ಸಲಾಡ್‌ನಿಂದ ಹಿಡಿದು, ಚಟ್ಟಂಬಡೆ, ಕೋಸಂಬರಿ, ಕಲ್ಲಂಗಡಿ, ನೆಲಗಡಲೆ ಉಸುಳಿ, ಬೇಸಿದ ಕಡಲೆ, ಕರಿ ಮೆಣಸಿನ ಕಷಾಯ, ಚಕ್ಕುಲಿ, ನಿಪ್ಪಟ್ಟು, ಕೋಡುಬಳೆ, ಜಿಲೇಬಿ ಸಹಿತ ಸುಮಾರು ೨೦ ಬಗೆಯ ಪ್ರಸಾದವನ್ನು ಸಿದ್ಧಪಡಿಸಲಾಗುತ್ತದೆ.