ಕಾರವಾರ : ವಿದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಜನರನ್ನು ನಂಬಿಸಿ ಅವರಿಂದ ಹಣ ಪಡೆದು ಮೋಸ ಮಾಡುತ್ತಿದ್ದ ಅಂತಾರಾಷ್ಟ್ರೀಯ ಸೈಬರ್ ವಂಚಕರ ತಂಡವೊಂದನ್ನು ಉತ್ತರಕನ್ನಡ ಜಿಲ್ಲಾ ಸೈಬರ್ ಕ್ರೈಂ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.
ಕೋಲಾರದ ವಸಂತ ನಗರದ ಅಶೋಕ ಎಂ.ಎನ್, ಅಸ್ಸೋಂ ಮೂಲದ ಬುಲ್ಲಿಯಾಂಗಿರ್ ಹಲಮ್, ತ್ರಿಪುರದ ದರ್ಟಿನ್ಬಿರ್ ಹಲಮ್, ಮಣಿಪುರದ ವಾರಿಂಗಮ್ ಪೂಂಗಶೊಕ್ ಬಂಧಿತ ಆರೋಪಿಗಳು.
ಕಳೆದ 7 ತಿಂಗಳ ಹಿಂದೆ ಹೊನ್ನಾವರ ಮೂಲದ ಯುವತಿಯೋರ್ವಳನ್ನು ಇಮೇಲ್ ಮೂಲಕ ಸಂಪರ್ಕಿಸಿದ ತಂಡವೊಂದು ಅಮೆರಿಕಾದಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಬರೋಬ್ಬರಿ 57 ಲಕ್ಷ ರೂ. ಹಣವನ್ನು ವಿವಿಧ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿಕೊಂಡು ವಂಚಿಸಿತ್ತು. ಈ ಕುರಿತು ಯುವತಿ ಫೆ.10ರಂದು ಕಾರವಾರದ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಳು.
ಬರೋಬ್ಬರಿ ಅರ್ಧ ಕೋಟಿಗೂ ಹೆಚ್ಚು ಹಣ ಕಳೆದುಕೊಂಡ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜು ಹಾಗೂ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್ ಬದರಿನಾಥ್ ಅವರು, ಸಿಇಎನ್ ಪೊಲೀಸ್ ಠಾಣೆಯ ಸಿಪಿಐ ಪಿ. ಸೀತಾರಾಮ ನೇತೃತ್ವದಲ್ಲಿ ತಂಡವೊಂದನ್ನು ರಚಿಸಿ ತನಿಖೆಗೆ ಸೂಚಿಸಿದ್ದರು. ಅದರಂತೆ ಬರೋಬ್ಬರಿ ಒಂದು ತಿಂಗಳು ಜಾಲಾಡಿದ ಪೊಲೀಸರು ನೈಜೀರಿಯಾ ಮೂಲದ ಗ್ಯಾಂಗ್ ಬೆಂಗಳೂರಿನಲ್ಲಿ ಇದ್ದು ಮೋಸ ಮಾಡಿರುವುದನ್ನು ಪತ್ತೆ ಹಚ್ಚಿದ್ದರು.
ಅದರಂತೆ ಬೆಂಗಳೂರಿಗೆ ತೆರಳಿ ಕಾರ್ಯಾಚರಣೆ ನಡೆಸಿದ ತಂಡ ನಾಲ್ವರು ಆರೋಪಿಗಳನ್ನು ವಶಕ್ಕೆ ಪಡೆದಿದೆ. ಬಂಧಿತರಿಂದ ವಿವಿಧ ಬ್ಯಾಂಕ್ ಖಾತೆಯಲ್ಲಿದ್ದ 2.61 ಲಕ್ಷ ರೂ. ನಗದು, ಸ್ವೈಪ್ ಮಶಿನ್, ಬಯೋಮೆಟ್ರಿಕ್ ಫಿಂಗರ್ ಪ್ರಿಂಟ್, 34 ಬ್ಯಾಂಕ್ ಅಕೌಂಟ್, 24 ವಿವಿಧ ಬ್ಯಾಂಕ್ ಎಟಿಎಂ, 24 ಚೆಕ್ ಬುಕ್, 23 ಮೊಬೈಲ್, 2 ಲ್ಯಾಪ್‌ಟಾಪ್, 17 ಸಿಮ್ ಕಾರ್ಡ್ ಸೇರಿ ಇನ್ನಿತರ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.
ಈ ಬಗ್ಗೆ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು, ನೈಜೀರಿಯಾ ಮೂಲದ ಗ್ಯಾಂಗ್ ಇಂತಹದೊಂದು ದೊಡ್ಡ ಸೈಬರ್ ಕ್ರೈಮ್ ನಡೆಸಿದೆ.
ಈಗಾಗಲೇ ನಾಲ್ವರನ್ನು ವಶಕ್ಕೆ ಪಡೆದಿದ್ದು, ಇನ್ನೂ ಹಲವರು ಇದರಲ್ಲಿ ಭಾಗಿಯಾಗಿದ್ದಾರೆ. ಈ ಬಗ್ಗೆ ಸಂಪೂರ್ಣ ತನಿಖೆ ಪೂರ್ಣಗೊಂಡ ಬಳಿಕವೇ ಆರೋಪಿಗಳ ಕೃತ್ಯ ಹೊರ ಬರಲಿದೆ ಎಂದರು.
ಇದನ್ನೂ ಓದಿ.. ಗಲಾಟೆ ಬಿಡಿಸಲು ಬಂದ ಪೊಲೀಸರ ಮೇಲೆ ಹಲ್ಲೆ : 2 ಗುಂಪಿನ 16 ಮಂದಿ ಬಂಧನ