ಶಿರಸಿ/ಉತ್ತರ ಕನ್ನಡ: ಶಿರಸಿಯ ಪೂರ್ವ ಭಾಗದಲ್ಲಿ ಕಳೆದ ಕೆಲ ದಿನಗಳಿಂದ ಕಡಿಮೆಯಾಗಿದ್ದ ಕಾಡಾನೆಗಳ ಉಪಟಳ ಈಗ ಮತ್ತೆ ಆರಂಭವಾಗಿದೆ.
ಶಿರಸಿ ತಾಲೂಕಿನ ಬನವಾಸಿ ಭಾಗದಲ್ಲಿ ನಾಲ್ಕು ಆನೆಗಳ ಹಿಂಡು ಕಾಣಿಸಿಕೊಂಡಿದ್ದು, ರೈತರಲ್ಲಿ ಆತಂಕ ಹೆಚ್ಚಾಗಿದೆ. ಬನವಾಸಿಯ ಮಧುರವಳ್ಳಿ, ಗುಡ್ನಾಪುರ, ಬೆಂಗಳೆ, ಕಲಕರಡಿ ಭಾಗದಲ್ಲಿ ಕಾಡಾನೆಗಳು ಸಂಚರಿಸಿದ್ದು, ರೈತರ ಅಡಿಕೆ ತೋಟ, ಭತ್ತದ ಗದ್ದೆಗಳಿಗೆ ಹಾನಿಯುಂಟು ಮಾಡಿವೆ. ಕಳೆದ ಒಂದು ತಿಂಗಳ ಹಿಂದೆ ಇದೇ ಬನವಾಸಿ ಭಾಗದಲ್ಲಿದ್ದ ಕಾಡಾನೆಗಳ ಹಿಂಡು ಈಗ ಮತ್ತೆ ಹಿಂದಿರುಗಿದ್ದು, ಅರಣ್ಯ ಇಲಾಖೆಯ ನಿರ್ಲಕ್ಷ್ಯಕ್ಕೆ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಎರಡು ದೊಡ್ಡ ಆನೆಗಳು, ಒಂದು ಐದು ವರ್ಷದ ಮರಿ ಹಾಗೂ ಒಂದು ವರ್ಷದ ಮರಿ ಆನೆ ದಾರಿ ತಪ್ಪಿಸಿಕೊಂಡು ಬನವಾಸಿ ಭಾಗಕ್ಕೆ ಬಂದಿದೆ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ. ಶಿವಮೊಗ್ಗ ಭಾಗದಿಂದ ಉತ್ತರ ಕನ್ನಡ ಜಿಲ್ಲೆಗೆ ಬಂದಿದೆ ಎನ್ನಲಾಗ್ತಿದ್ದು, ಹಿನ್ನೀರಿನ ಪ್ರದೇಶ ಗುರುತಿಸುವಲ್ಲಿ ವಿಫಲವಾಗ್ತಿವೆ ಎಂದು ತಿಳಿದುಬಂದಿದೆ.