ಕಾರವಾರ: ಜಿಲ್ಲೆಯ ವಿವಿಧೆಡೆ ಕಳ್ಳಬಟ್ಟಿ ಹಾಗೂ ಅಕ್ರಮ ಮದ್ಯ ಸಂಗ್ರಹ ಅಡ್ಡೆ ಮೇಲೆ ಅಬಕಾರಿ ಹಾಗೂ ಪೊಲೀಸ್ ಸಿಬ್ಬಂದಿ ದಾಳಿ ನಡೆಸಿದರು.
ದಾಳಿ ವೇಳೆ ಬರೊಬ್ಬರಿ 27.9 ಲಕ್ಷ ಮೌಲ್ಯದ ಅಕ್ರಮ ಮದ್ಯವನ್ನು ವಶಕ್ಕೆ ಪಡೆದಿದ್ದಾರೆ. ಚುನಾವಣೆ ನೀತಿ ಸಂಹಿತೆ ಹಿನ್ನೆಲೆ ಜಿಲ್ಲೆಯಾದ್ಯಂತ ಹದ್ದಿನ ಕಣ್ಣಿಟ್ಟಿರುವ ಅಬಕಾರಿ ಹಾಗೂ ಪೊಲೀಸ್ ಇಲಾಖೆ ಚೆಕ್ ಪೋಸ್ಟ್ ಗಳಲ್ಲಿ ತೀವ್ರ ತಪಾಸಣೆ ನಡೆಸುತ್ತಿದೆ.

ಅಲ್ಲದೆ ಅಬಕಾರಿ ಅಧಿಕಾರಿಗಳು ಖಚಿತ ಮಾಹಿತಿ ಆಧರಿಸಿ ಜಿಲ್ಲೆಯ ಹೊನ್ನಾವರ ತಾಲೂಕಿನ ಕರ್ನಾಟಕ ರಾಜ್ಯ ಪಾನೀಯ ನಿಗಮದಲ್ಲಿ ಸಂಗ್ರಹಿಸಿದ ಬಾರ್ಕೊಡ್ ಹೊಂದಾಣಿಕೆಯಿಲ್ಲದ ರೂ 14.80 ಲಕ್ಷ ಮೌಲ್ಯದ 1,150 ಬಾಕ್ಸ್ ನ 90,64,800 ಲೀಟರ್ ಬಿಯರ್ ವಶಕ್ಕೆ ಪಡೆದಿದ್ದಾರೆ.

ಸಿದ್ದಾಪುರ ತಾಲೂಕಿನ ಮಾವಿನಗುಂಡಿ ಚೆಕ್ ಪೋಸ್ಟ್ ನಲ್ಲಿ ಕಾರಿನ ತಪಾಸಣೆ ವೇಳೆ 12 ಲೀಟರ್ ಗೋವಾ ಮದ್ಯ ಸಿಕ್ಕಿದ್ದು, ಚಾಲಕ ಸಹಿತ ವಾಹನವನ್ನು ವಶಕ್ಕೆ ಪಡೆಯಲಾಗಿದೆ. ಇನ್ನು ಅಂಕೋಲಾ ವ್ಯಾಪ್ತಿಯಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ 14.5 ಲೀಟರ್ ಗೋವಾ ಫೆನ್ನಿ ಹಾಗೂ ಮಂಜಗುಣಿ ಮೂಲದ ಸತೀಶ್ ಎನ್ನುವವರನ್ನು ವಶಕ್ಕೆ ಪಡೆಯಲಾಗಿದೆ.

ದಾಂಡೇಲಿಯ ಮೈಲವಾಡಾದಲ್ಲಿ 18 ಲೀಟರ್ ಮದ್ಯ ಹಾಗೂ 3.3 ಲೀಟರ್ ಬಿಯರ್, ಹೊನ್ನಾವರ ತಾಲೂಕಿನ ಕಾವೂರಿನ ಅರಣ್ಯ ಪ್ರದೇಶದಲ್ಲಿ 220 ಲೀಟರ್ ಕಳ್ಳಬಟ್ಟಿಯನ್ನು ನಾಶಪಡಿಸಲಾಗಿದೆ. ಒಟ್ಟಾರೆ 5 ಪ್ರತ್ಯೇಕ ಪ್ರಕರಣದಲ್ಲಿ ರೂ 27.09 ಮೌಲ್ಯದ ಅಕ್ರಮ ಮದ್ಯ, ಒಂದು ಕಾರು ಸೇರಿ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿರುವ ಅಬಕಾರಿ ಸಿಬ್ಬಂದಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
