ಕಾರವಾರ(ಉತ್ತರ ಕನ್ನಡ): ಭಾರತೀಯ ಸೇನೆಯಲ್ಲಿ 25 ವರ್ಷ ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿ ಪಡೆದು ಸ್ವಗ್ರಾಮಕ್ಕೆ ಆಗಮಿಸಿದ ಯೋಧನನ್ನು ಗ್ರಾಮಸ್ಥರು ಅದ್ಧೂರಿ ಮತ್ತು ಆತ್ಮೀಯವಾಗಿ ಸ್ವಾಗತಿಸಿ ಮೆರವಣಿಗೆ ಮಾಡಿದರು. ಕಾರವಾರ ತಾಲೂಕಿನ ಭೋವಿವಾಡದ ಯೋಧ ಬಾಲಕೃಷ್ಣ ಭೋವಿ ನಿವೃತ್ತಿಯಾಗಿ ಶಿರವಾಡದ ರೈಲ್ವೆ ನಿಲ್ದಾಣಕ್ಕೆ ಆಗಮಿಸುತ್ತಿರುವ ಬಗ್ಗೆ ಮಾಹಿತಿ ಪಡೆದ ಗ್ರಾಮಸ್ಥರು, ರೈಲ್ವೆ ನಿಲ್ದಾಣದಲ್ಲಿ ಜಮಾಯಿಸಿದ್ದರು. ರೈಲು ನಿಲ್ದಾಣದಿಂದ ಭೋವಿವಾಡ ಗ್ರಾಮದವರೆಗೂ ತೆರೆದ ಜೀಪ್‌ನಲ್ಲಿ ದೇಶ ಸೇವೆ ಮಾಡಿದ ಯೋಧನ ಮೆರವಣಿಗೆ ನಡೆಯಿತು.
1997ರಲ್ಲಿ ಬಿಎಸ್‌ಎಫ್ ಸೇರಿದ ಬಾಲಕೃಷ್ಣ ಬಳಿಕ ಇಂದೋರ್‌ನಲ್ಲಿ ತರಬೇತಿ ಪಡೆದುಕೊಂಡಿದ್ದರು. ಆ ಬಳಿಕ ಪಶ್ಚಿಮ ಬಂಗಾಳ, ಶಿಲ್ಲಾಂಗ್, ಜಮ್ಮು ಕಾಶ್ಮೀರ, ಗುಜರಾತ್, ಪಂಜಾಬ್, ಛತ್ತೀಸ್‌ಗಢ್ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಸೇವೆ ಸಲ್ಲಿಸಿದ್ದರು. ಅಲ್ಲದೇ 1999ರಲ್ಲಿ ನಡೆದಿದ್ದ ಕಾರ್ಗಿಲ್ ಯುದ್ಧದಲ್ಲಿಯೂ ಸಹ ಇವರು ಭಾಗಿಯಾಗಿದ್ದರು.
ನಿವೃತ್ತ ಯೋಧ ಬಾಲಕೃಷ್ಣ ಮಾತನಾಡಿ, "ಸಿನೆಮಾ ನಟರಿಗೆ ಸಿಗುವಂತಹ ಅದ್ಧೂರಿ ಸ್ವಾಗತ ತಮ್ಮ ಊರಿನ ಜನರು ನನಗೆ ನೀಡಿದ್ದಾರೆ. ಇದರಿಂದ ತುಂಬಾ ಖುಷಿಯಾಗಿದೆ. ಯುವಕರು ಸೇನೆ ಸೇರಲು ಮುಂದಾಗಬೇಕು" ಎಂದರು.
"ಯುದ್ಧದ ಸಂದರ್ಭದಲ್ಲಿ ಗುಂಡುಗಳು ವಾಹನಕ್ಕೆ ಬಡಿದು ವಾಹನ ಜಖಂಗೊಂಡಾಗಲೂ ಸಹ ಗುಂಡು ನಿರೋಧಕ ವಾಹನಗಳಿಂದಾಗಿ ನಾವು ಸುರಕ್ಷಿತವಾಗಿರಲು ಸಾಧ್ಯವಾಯಿತು. ಅಲ್ಲದೇ ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಭದ್ರತೆ ಕೈಗೊಂಡಿದ್ದಾಗ ಮೈಯೆಲ್ಲಾ ಕಣ್ಣಾಗಿ ಕಾಯಬೇಕಾಗಿತ್ತು. ಅಂತಹ ಪರಿಸ್ಥಿತಿಗಳನ್ನು ಹೊರತುಪಡಿಸಿದರೆ ಉಳಿದ ಸಂದರ್ಭಗಳಲ್ಲಿ ಹೆಚ್ಚಿನ ತೊಂದರೆಯಾಗಿಲ್ಲ" ಎಂದು ನಿವೃತ್ತ ಯೋಧ ತಮ್ಮ ಅನುಭವ ಹಂಚಿಕೊಂಡರು.
ಇದನ್ನೂ ಓದಿ : ದೇಶ ಸೇವೆ ಬಳಿಕ ತವರಿಗೆ ಮರಳಿದ ಯೋಧ.. ಅದ್ದೂರಿಯಾಗಿ ಬರಮಾಡಿಕೊಂಡ ದಾವಣಗೆರೆ ಮಂದಿ