ಕಾರವಾರ : ಜಿಲ್ಲಾ ಕೇಂದ್ರಕ್ಕೆ ಹತ್ತಿರವಿದ್ದರೂ ಮೂಲಸೌಲಭ್ಯಗಳಿಂದ ವಂಚಿತವಾದ ಗ್ರಾಮದ ಕಥೆ ಇದು. ಗ್ರಾಮದಲ್ಲಿ ಯಾರೇ ಅನಾರೋಗ್ಯಕ್ಕೆ ತುತ್ತಾದ್ರೂ ಆಸ್ಪತ್ರೆಗೆ ಜೋಲಿಯಲ್ಲಿಯೇ ಹೊತ್ತೊಯ್ಯಬೇಕಾದ ದುಸ್ಥಿತಿ ಇಲ್ಲಿದೆ.
ಕಾರವಾರ ನಗರದಿಂದ ಸುಮಾರು 7 ಕಿ.ಮೀ ದೂರದಲ್ಲಿರುವ ಗುಡ್ಡಳ್ಳಿ ಗ್ರಾಮ ಹೆಸರಿಗೆ ತಕ್ಕಂತೆ ಗುಡ್ಡದ ಮೇಲಿದೆ. ಗ್ರಾಮದಲ್ಲಿ ಸುಮಾರು 30ಕ್ಕೂ ಅಧಿಕ ಮನೆಗಳಿವೆ. ಬಹುತೇಕರು ಕೃಷಿ ನಂಬಿ ಜೀವನ ಸಾಗಿಸುತ್ತಿದ್ದಾರೆ. ಕಾರವಾರ ನಗರಸಭೆ ವ್ಯಾಪ್ತಿಯ ಗ್ರಾಮವಾಗಿದ್ದರೂ ಸಹ ಗುಡ್ಡಳ್ಳಿಗೆ ಅಗತ್ಯ ಮೂಲಸೌಕರ್ಯಗಳು ಮರೀಚಿಕೆಯಾಗಿದೆ.
ಇದನ್ನೂ ಓದಿ: 70 ವರ್ಷ ಕಳೆದರೂ ಸೂಕ್ತ ರಸ್ತೆಯಿಲ್ಲ, ಆಸ್ಪತ್ರೆ ಸೇರಬೇಕಾದರೆ ಸೀರೆ ಜೋಲಿಯೇ ಗತಿ!
ಗ್ರಾಮಕ್ಕೆ ಸಂಪರ್ಕ ಕಲ್ಪಿಸಲು ಸೂಕ್ತ ರಸ್ತೆವ್ಯವಸ್ಥೆ ಇಲ್ಲ. ಇಂದಿಗೂ ಸಹ ಗ್ರಾಮಸ್ಥರು ಕಾಡಿನ ನಡುವೆ ಹಾದು ಹೋಗಿರುವ ಕಲ್ಲು-ಮಣ್ಣಿನ ಕಚ್ಛಾ ರಸ್ತೆಯಲ್ಲಿಯೇ ನಡೆದುಕೊಂಡು ಗ್ರಾಮಕ್ಕೆ ತೆರಳಬೇಕಿದೆ. ಗ್ರಾಮದ ವೃದ್ಧೆಯೋರ್ವರು ಅನಾರೋಗ್ಯಕ್ಕೆ ತುತ್ತಾಗಿದ್ದು, ಈ ವೇಳೆ ಗ್ರಾಮದ ಯುವಕರು ಸೇರಿ ಜೋಳಿಗೆ ಮಾಡಿ 7 ಕಿ.ಮೀ ದೂರ ಹೊತ್ತುಕೊಂಡೇ ಆಸ್ಪತ್ರೆಗೆ ಸಾಗಿಸಿದ್ದಾರೆ.
ಗ್ರಾಮದಲ್ಲಿ ಸುಮಾರು 150ಕ್ಕೂ ಅಧಿಕ ಮಂದಿ ವಾಸವಿದ್ದಾರೆ. ಇವರೆಲ್ಲಾ ಬುಡಕಟ್ಟು ಹಾಲಕ್ಕಿ ಜನಾಂಗಕ್ಕೆ ಸೇರಿದವರು. ಗ್ರಾಮದ ಮಕ್ಕಳು ಶಾಲೆಗಳಿಗೆ ಹೋಗಬೇಕೆಂದ್ರೆ ನಿತ್ಯ 7 ಕಿ.ಮೀ ಕಾಡಿನ ದಾರಿಯಲ್ಲೇ ನಡೆಯಬೇಕು. ನಗರಸಭೆ ವ್ಯಾಪ್ತಿಯಲ್ಲಿದ್ದರೂ ಸಹ ಗ್ರಾಮಕ್ಕೆ ರಸ್ತೆ ಇಲ್ಲ. ವಿದ್ಯುತ್ ಸಂಪರ್ಕವನ್ನೂ ಸಹ ಗ್ರಾಮಸ್ಥರೇ ಹರ ಸಾಹಸಪಟ್ಟು ಮಾಡಿಸಿಕೊಂಡಿದ್ದಾರೆ.
ಪ್ರತಿ ಬಾರಿ ನಡೆಯುವ ವಿವಿಧ ಚುನಾವಣೆಗಳಿಗೆ ಗ್ರಾಮಸ್ಥರು ಕೀ.ಮೀಗಟ್ಟಲೆ ನಡೆದುಕೊಂಡು ಬಂದು ಮತ ಚಲಾವಣೆ ಮಾಡಿ ತೆರಳುತ್ತಾರೆ. ಆದರೆ, ಯಾವೊಬ್ಬ ಜನಪ್ರತಿನಿಧಿಯೂ ಸಹ ನಮ್ಮ ಸಮಸ್ಯೆ ಬಗೆಹರಿಸುವುದಕ್ಕೆ ಮುಂದಾಗಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸುತ್ತಾರೆ ಇಲ್ಲಿನ ಮಂದಿ.