ಶಿರಸಿ (ಉತ್ತರ ಕನ್ನಡ) : ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಮಾಜಿ ಸಂಸದನ ಮನೆಗೆ ಹಾಡ ಹಗಲೇ ಅಪರಿಚಿತ ವ್ಯಕ್ತಿಯೊಬ್ಬ ನೀರು ಕೇಳಲು ಬಂದು, ಬಂಗಾರದ ಸರವನ್ನು ಹರಿದುಕೊಂಡು ಹೋದ ಆತಂಕಕಾರಿ ಘಟನೆ ಬುಧವಾರ ಜರುಗಿದೆ.
ಕಾಂಗ್ರೆಸ್ನಿಂದ ನಾಲ್ಕು ಬಾರಿ ಸಂಸದರಾಗಿ ಆಯ್ಕೆಯಾಗಿದ್ದ ದೇವರಾಜ ನಾಯ್ಕ ಅವರ ಮನೆಯಲ್ಲಿ ಕಳ್ಳತನ ಪ್ರಕರಣ ನಡೆದಿದೆ. ಶಿರಸಿ ನಗರದ ಯಲ್ಲಾಪುರ ನಾಕಾದಲ್ಲಿರುವ ಮಾಜಿ ಸಂಸದರ ಮನೆಯಲ್ಲಿ ಅವರ ಪತ್ನಿ ಗೀತಾ ನಾಯ್ಕ ಒಬ್ಬರೇ ಇದ್ದಾಗ ಅಪರಿಚಿತ ವ್ಯಕ್ತಿಯೊಬ್ಬ ನೀರು ಕೇಳುವ ನೆಪ ಮಾಡಿಕೊಂಡು, ಅವರ ಕುತ್ತಿಗೆಯಲ್ಲಿ ಸರವನ್ನು ಹರಿದುಕೊಂಡು ಹೋಗಿದ್ದಾನೆ.
ಅಂದಾಜು 3 ಲಕ್ಷ ರೂ. ಮೌಲ್ಯದ 60 ಗ್ರಾಂ ತೂಕದ ಸರವನ್ನು ಕಿತ್ತುಕೊಂಡು ಕಳ್ಳ ಪರಾರಿಯಾಗಿದ್ದಾನೆ. ಬುಧವಾರ ಮಧ್ಯಾಹ್ನ 12 ಗಂಟೆಯ ವೇಳೆಗೆ ಘಟನೆ ಜರುಗಿದ್ದು, ಆ ಸಮಯದಲ್ಲಿ ಮಾಜಿ ಸಂಸದರ ಪತ್ನಿ ಹೊರತುಪಡಿಸಿ ಮನೆಯಲ್ಲಿ ಬೇರೆ ಯಾರೂ ಇರಲಿಲ್ಲ. ವಿಷಯ ತಿಳಿದ ನಂತರ ಸಿದ್ದಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರಾಗಿರುವ ಮಗ ನಾಗರಾಜ ನಾಯ್ಕ ಸ್ಥಳಕ್ಕೆ ಆಗಮಿಸಿ, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಈಗಾಗಲೇ ಮಾಜಿ ಸಂಸದರ ಮನೆಗೆ ಮಾರುಕಟ್ಟೆ ಠಾಣೆ ಪೊಲೀಸರು ಭೇಟಿ ನೀಡಿದ್ದು, ಆರೋಪಿಯನ್ನು ಹಿಡಿಯಲು ನಾಕಾಬಂದಿ ಸೇರಿದಂತೆ ವಿವಿಧ ತುರ್ತು ಕ್ರಮ ಕೈಗೊಂಡಿದ್ದಾರೆ. ಆದರೆ, ಮನೆಗೆ ಸಿಸಿಟಿವಿ ಇಲ್ಲದೇ ಇರುವುದು ಸಮಸ್ಯೆಯಾಗಿದೆ. ಇನ್ನು ಜಿಲ್ಲೆಯ ಮುಂಡಗೋಡಿನಲ್ಲಿ ಕೊಲೆ ನಡೆದ ಘಟನೆ ಪರಿಶೀಲನೆ ಮುನ್ನವೇ ಇನ್ನೊಂದು ಆತಂಕಕಾರಿ ಘಟನೆ ಜರುಗಿದಂತಾಗಿದೆ.
ನೀರು ಕೇಳುವ ನೆಪದಲ್ಲಿ ಮಹಿಳೆಯ ಸರ ಎಗರಿಸಲು ಯತ್ನ : ನೀರು ಕೇಳುವ ನೆಪದಲ್ಲಿ ಬಂದ ದುಷ್ಕರ್ಮಿಯೊಬ್ಬ ಮಹಿಳೆಯ ಸರ ಎಗರಿಸಲು ಯತ್ನಿಸಿದ ಘಟನೆ ತೀರ್ಥಹಳ್ಳಿ ತಾಲೂಕಿನ ಹಾದಿಗಲ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕರಡಿಗ ಗ್ರಾಮದಲ್ಲಿ( ಜೂನ್ 24-2022) ನಡೆದಿತ್ತು. ಕಾರಿನಲ್ಲಿ ಬಂದಿದ್ದ ಇಬ್ಬರಲ್ಲೊಬ್ಬ ಮನೆಯೊಳಗೆ ಹೋಗಿ ಕುಡಿಯಲು ನೀರು ಕೇಳಿದ್ದ. ಮಹಿಳೆ ನೀರು ತರುತ್ತಿದ್ದಂತೆಯೇ ಆಕೆಯ ಬಾಯಿ ಮುಚ್ಚಿ ಕೊರಳಿನಲ್ಲಿದ್ದ ಮಾಂಗಲ್ಯ ಸರ ಕಿತ್ತುಕೊಳ್ಳುವ ಯತ್ನ ಮಾಡಿದ್ದ.
ಮಹಿಳೆ ಆತನಿಂದ ಬಿಡಿಸಿಕೊಂಡು ಜೋರಾಗಿ ಕಿರುಚಿದ್ದರು. ನೆರೆಮನೆಯವರು ಸ್ಥಳಕ್ಕೆ ಬಂದಿದ್ದರು. ಅಷ್ಟರಲ್ಲಿ ಆರೋಪಿ ಓಡಿ ಹೋಗಿದ್ದ. ಕಾರಿನಲ್ಲಿ ಕುಳಿತುಕೊಂಡಿದ್ದ ಇನ್ನೊಬ್ಬ ತಪ್ಪಿಸಿಕೊಳ್ಳಲು ಸಾಧ್ಯವಾಗದೇ ಗ್ರಾಮಸ್ಥರ ಕೈಗೆ ಸಿಕ್ಕಿಹಾಕಿಕೊಂಡ. ಆತನನ್ನು ವಿಚಾರಿಸಿದಾಗ, ನಾವಿಬ್ಬರು ಉತ್ತರ ಕರ್ನಾಟಕದವರು, ಇಲ್ಲಿಗೆ ಜೆಸಿಬಿ ಕೆಲಸಕ್ಕೆಂದು ಬಂದಿದ್ದೇವೆ ಎಂದು ತಿಳಿಸಿದ್ದ. ಈತನನ್ನು ತೀರ್ಥಹಳ್ಳಿ ಪೊಲೀಸರಿಗೆ ಗ್ರಾಮಸ್ಥರು ಒಪ್ಪಿಸಿದ್ದರು. ಕಾರು ಕೋಣಂದೂರು ಮೂಲದವರದ್ದು ಎಂದು ತಿಳಿದು ಬಂದಿತ್ತು.
ಮಹಿಳೆಗೆ ಖಾರದಪುಡಿ ಎರಚಿ ಮಾಂಗಲ್ಯ ಸರ ಕದಿಯಲು ಯತ್ನ: ಮಹಿಳೆಗೆ ಖಾರದಪುಡಿ ಎರಚಿ ಮಾಂಗಲ್ಯ ಸರ ಕಳ್ಳತನ ಮಾಡಿ ಪರಾರಿಯಾಗಲು ಯತ್ನಿಸಿದ ಇಬ್ಬರು ಕಳ್ಳರನ್ನು ಗ್ರಾಮಸ್ಥರು ಹಿಡಿದು ಥಳಿಸಿ ಪೊಲೀಸರಿಗೊಪ್ಪಿಸಿದ ಘಟನೆ ತುರುವೇಕೆರೆಯಲ್ಲಿ (ಆಗಸ್ಟ್ 9-2022) ನಡೆದಿತ್ತು. ಮಹಿಳೆಯಿಂದ ಸರ ಕದ್ದು ತಪ್ಪಿಸಿಕೊಳ್ಳಲು ದಾರಿ ತೋಚದ ಕಾರಣ, ಅಡಕೆ ತೋಟಕ್ಕೆ ನುಗ್ಗಿದ್ದರು. ಈ ವೇಳೆ ಬೈಕ್ ಮಣ್ಣಿನಲ್ಲಿ ಸಿಲುಕಿದ್ದು, ಮುಂದೆ ತೆರಳಲಾರದೇ ಸ್ಥಳೀಯರ ಕೈಗೆ ಸಿಕ್ಕಿಬಿದ್ದಿದ್ದರು.
ಇದನ್ನೂ ಓದಿ: ಮಹಿಳೆಗೆ ಖಾರದಪುಡಿ ಎರಚಿ ಮಾಂಗಲ್ಯಸರ ಕದಿಯಲು ಯತ್ನ: ಸರಗಳ್ಳರನ್ನು ಹಿಡಿದು ಥಳಿಸಿದ ಗ್ರಾಮಸ್ಥರು!