ಕಾರವಾರ (ಉತ್ತರಕನ್ನಡ) : ಅದು ಪ್ರತಿ ನಿತ್ಯ ಸಾವಿರಾರು ಮಂದಿ ಭಕ್ತರು ಭೇಟಿ ನೀಡುವ ದಕ್ಷಿಣ ಕಾಶಿ ಖ್ಯಾತಿ ಗೋಕರ್ಣ ಕ್ಷೇತ್ರ. ಇಲ್ಲಿನ ಕೋಟಿತೀರ್ಥ ಪುಷ್ಕರಣಿ ಪವಿತ್ರ ಸ್ಥಳವಾಗಿರುವ ಹಿನ್ನೆಲೆ ಸಾಕಷ್ಟು ಮಂದಿ ಧಾರ್ಮಿಕ ಕಾರ್ಯಗಳನ್ನ ಇಲ್ಲಿ ಕೈಗೊಳ್ಳುತ್ತಾರೆ. ಆದರೆ, ದಶಕಗಳಿಂದ ಈ ಪುಷ್ಕರಣಿ ಮಲಿನಗೊಂಡಿದ್ದು, ಬಂದಂತಹ ಭಕ್ತರು ಇಲ್ಲಿನ ನೀರಿಗೆ ಇಳಿಯಲು ಅಸಹ್ಯಪಡುವಂತಹ ಪರಿಸ್ಥಿತಿ ಇತ್ತು. ಇದೀಗ ಕೋಟಿ ತೀರ್ಥಕ್ಕೆ ಕಾಯಕಲ್ಪ ಭಾಗ್ಯ ದೊರೆತಿದ್ದು, ಕೋಟ್ಯಂತರ ರೂ.ವೆಚ್ಚದಲ್ಲಿ ಕಲ್ಯಾಣಿ ಸ್ವಚ್ಛತೆ ಕಾರ್ಯ ಆರಂಭವಾಗಿದೆ.
ಉತ್ತರಕನ್ನಡ ಜಿಲ್ಲೆಯ ಕುಮಟಾ ತಾಲೂಕಿನಲ್ಲಿರುವ ವಿಶ್ವ ಪ್ರಸಿದ್ಧ ಗೋಕರ್ಣ ಕ್ಷೇತ್ರದಲ್ಲಿನ ಕೋಟಿತೀರ್ಥ ಸ್ನಾನ ಗಂಗಾ ನದಿ ಸ್ನಾನದಷ್ಟೇ ಪವಿತ್ರ ಎಂಬ ಪೌರಾಣಿಕ ಹಿನ್ನೆಲೆಯಿಲೆ ಇದೆ. ಹೀಗಾಗಿ, ದೇವಸ್ಥಾನಕ್ಕೆ ಆಗಮಿಸುವ ಸಾಕಷ್ಟು ಮಂದಿ ಭಕ್ತರು ದೇವರ ದರ್ಶನಕ್ಕೆ ಮುನ್ನ ಕೋಟಿತೀರ್ಥದಲ್ಲಿ ಸ್ನಾನ ಮಾಡಿ ತೆರಳುತ್ತಾರೆ.
ಜತೆಗೆ ಪಿಂಡ ಪ್ರಧಾನದಂತಹ ಹಲವಾರು ಧಾರ್ಮಿಕ ಕಾರ್ಯಗಳನ್ನ ಸಹ ಕೋಟಿತೀರ್ಥದಲ್ಲಿಯೇ ನೆರವೇರಿಸಲು ಸಾಕಷ್ಟು ಮಂದಿ ಆಗಮಿಸುವುದರಿಂದ ಇಲ್ಲಿಯೇ ಸ್ನಾನ ಮಾಡಬೇಕಾಗಿದೆ. ಆದ್ರೆ, ಇಂತಹ ಸ್ಥಳ ಸೂಕ್ತ ಸ್ವಚ್ಛತೆ ಇಲ್ಲದೇ ಅಂದ ಕಳೆದುಕೊಂಡಿದ್ದು ಪಾಚಿ, ಹಾವಸೆ ಬೆಳೆದು ನೀರಿನಲ್ಲಿ ಇಳಿಯಲು ಭಕ್ತರು ಅಸಹ್ಯ ಪಡಬೇಕಾದ ಸ್ಥಿತಿ ನಿರ್ಮಾಣವಾಗಿತ್ತು.
ಹೂಳೆತ್ತುವ ಕಾರ್ಯಕ್ಕೆ ಚಾಲನೆ : ಇದೀಗ ಕೋಟಿತೀರ್ಥವನ್ನ ಸ್ವಚ್ಛಗೊಳಿಸಲು ಸರ್ಕಾರವೇ ಮುಂದಾಗಿದ್ದು, ಒಂದೂವರೆ ಕೋಟಿ ರೂ.ವೆಚ್ಚದಲ್ಲಿ ಪುಷ್ಕರಣಿಯ ಹೂಳೆತ್ತುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಈಗಾಗಲೇ ಕೋಟಿತೀರ್ಥದಿಂದ ನೀರನ್ನ ಖಾಲಿಮಾಡಿಸುವ ಪ್ರಕ್ರಿಯೆ ಮುಕ್ತಾಯವಾಗಿದ್ದು, ಪುಷ್ಕರಣಿಯಲ್ಲಿ ತುಂಬಿಕೊಂಡಿದ್ದ ಹೂಳನ್ನ ಒಣಗಲು ಬಿಡಲಾಗಿದೆ. ಹೂಳು ಒಣಗುತ್ತಿದ್ದಂತೆ ಹಂತ ಹಂತವಾಗಿ ಜೆಸಿಬಿಗಳ ಸಹಾಯದಿಂದ ಹೂಳೆತ್ತಿ ಬೇರೆಡೆಗೆ ಸ್ಥಳಾಂತರ ಮಾಡಲಾಗುತ್ತದೆ.
ಏಪ್ರಿಲ್ ಅಂತ್ಯದ ವೇಳೆಗೆ ಸ್ವಚ್ಛತಾ ಕಾರ್ಯ ಪೂರ್ಣ : ಸದ್ಯ ಒಂದರಿಂದ ಎರಡು ಅಡಿಗಳಷ್ಟು ಹೂಳು ತುಂಬಿಕೊಂಡಿರುವುದಾಗಿ ಎಂಜಿನಿಯರ್‌ಗಳು ತಿಳಿಸಿದ್ದಾರೆ. ಹೂಳನ್ನ ಸಂಪೂರ್ಣವಾಗಿ ತೆರವುಗೊಳಿಸಿದ ಬಳಿಕ ತಳಭಾಗಕ್ಕೆ ಸಿಮೆಂಟ್ ಹಾಕುವ ಕಾರ್ಯ ನಡೆಯಲಿದೆ. ಈಗಾಗಲೇ ಕೋಟಿತೀರ್ಥದಿಂದ ನೀರನ್ನ ಖಾಲಿ ಮಾಡಿಸುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದ್ದು, ಏಪ್ರಿಲ್ ಅಂತ್ಯದ ವೇಳೆ ಸ್ವಚ್ಛತಾ ಕಾರ್ಯ ಪೂರ್ಣಗೊಳಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗೋಕರ್ಣ ಕ್ಷೇತ್ರ ಮೃತರ ಅಸ್ಥಿ ವಿಸರ್ಜನೆಗೆ ಪವಿತ್ರ ಸ್ಥಳವಾಗಿದೆ. ಹೀಗಾಗಿ ಅಸ್ಥಿ ವಿಸರ್ಜನೆಗೆ ಬರುವವರು ಮೊದಲು ಕೋಟಿತೀರ್ಥದಲ್ಲಿ ಇರುವ ಕಟ್ಟೆಯಲ್ಲಿ ಕುಳಿತು ಪೂಜಾ ಕಾರ್ಯಮಾಡಿ ನಂತರ ಸ್ನಾನ ಮಾಡಿ ತೆರಳುತ್ತಾರೆ. ಕೋಟಿತೀರ್ಥಕ್ಕೆ ಆಗಮಿಸುವ ಪ್ರವಾಸಿಗರು ಪೂಜೆ ಮಾಡಿದ ನಂತರ ಅನ್ನ ಇನ್ನಿತರೆ ವಸ್ತುಗಳನ್ನ ನೀರಿಗೆ ಹಾಕುವುದರಿಂದ ಇಲ್ಲಿ ಮಲಿನ ಹೆಚ್ಚಾಗಿದೆ. ಪ್ರತಿವರ್ಷ ಸ್ವಚ್ಛತಾ ಕಾರ್ಯ ಕೈಗೊಳ್ಳದ ಹಿನ್ನೆಲೆ ಹೂಳು ತುಂಬಿಕೊಂಡಿತ್ತು.
ಸ್ಥಳೀಯ ಕೆಲ ಸಂಘಟನೆಗಳು ದೀಪೋತ್ಸವ ಇರುವ ಸಂದರ್ಭದಲ್ಲಿ ನೀರಿನ ಮೇಲೆ ಬೆಳೆದ ಪಾಚಿ, ಹಾವಸೆಗಳನ್ನ ಸ್ವಚ್ಛಗೊಳಿಸುತ್ತಿದ್ದರಾದರೂ ಹೂಳು ತೆಗೆಯುವ ಕಾರ್ಯ ಮಾತ್ರ ದಶಕಗಳಿಂದ ನಡೆದಿರಲಿಲ್ಲ. ಇದೀಗ ಸರ್ಕಾರವೇ ಮುಂದಾಗಿ ಪುಷ್ಕರಣಿಯ ಸ್ವಚ್ಛತೆ ಕಾರ್ಯ ಕೈಗೊಳ್ಳುತ್ತಿರುವುದಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಕೋಟಿತೀರ್ಥ ಮತ್ತೆ ಮೊದಲಿನ ಅಂದ ಪಡೆದುಕೊಳ್ಳುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.