ಕಾರವಾರ: ಇಂಡಿಯನ್ ಕೋಸ್ಟ್ ಗಾರ್ಡ್ ಕಡಲ ತೀರದಲ್ಲಿ ಗಸ್ತು ತಿರುಗಿ ಉಗ್ರರ ಮೇಲೆ ಹದ್ದಿನ ಕಣ್ಣಿಡುವುದಲ್ಲದೇ ಕಡಲಿನಲ್ಲಿ ಸಂಕಷ್ಟದಲ್ಲಿರುವ ಮೀನುಗಾರರ ರಕ್ಷಣೆ ಮಾಡುವಲ್ಲಿಯೂ ಪ್ರಮುಖ ಪಾತ್ರ ವಹಿಸುತ್ತದೆ. ಆದರೆ ರಾಜ್ಯದ ಕರಾವಳಿ ಜಿಲ್ಲೆ ಕಾರವಾರದಲ್ಲಿ ಇದೇ ಕೋಸ್ಟ್ ಗಾರ್ಡಿಗೆ ಸ್ವಂತ ಕಟ್ಟಡ ಇಲ್ಲದೇ ಕಳೆದ 12 ವರ್ಷದಿಂದ ಸಮಸ್ಯೆ ಎದುರಾಗಿತ್ತು. ಇದೀಗ ಸುಮಾರು 26 ಎಕರೆ ಜಾಗದಲ್ಲಿ ಕೋಸ್ಟ್ ಗಾರ್ಡ್ ಕಚೇರಿ ಕಟ್ಟಲು ಸರ್ಕಾರ ಮುಂದಾಗಿದೆ.
ರಾಜ್ಯದ ಕರಾವಳಿ ಜಿಲ್ಲೆಯ ಉತ್ತರ ಕನ್ನಡದ ಕಾರವಾರಕ್ಕೆ 2008ರಲ್ಲಿ ಕೋಸ್ಟ್ ಗಾರ್ಡ್ ಕಾಲಿಟ್ಟಿತ್ತು. ಆದರೆ ಸ್ವಂತ ಜಾಗ ಸಿಗದೆ ಬಾಡಿಗೆ ಕಟ್ಟಡದಲ್ಲಿಯೇ ಕೋಸ್ಟ್ ಗಾರ್ಡ್ ಕಛೇರಿ ಇದ್ದು, ಕಚೇರಿ ನಿರ್ಮಾಣಕ್ಕಾಗಿ ಜಾಗ ನೀಡುವಂತೆ ಸರ್ಕಾರದ ಮೇಲೆ ಸಾಕಷ್ಟು ಬಾರಿ ಒತ್ತಡ ಹಾಕಿದ್ದರು. ಆದರೆ ಅದು ಸಾಧ್ಯವಾಗಿರಲಿಲ್ಲ.
ಶಂಕುಸ್ಥಾಪನೆ ನೆರವೇರಿಸಿದ ಜಿಲ್ಲಾ ಉಸ್ತುವಾರಿ ಸಚಿವ: ಆದರೆ ಈಗ ಕಾರವಾರದ ಅಮದಳ್ಳಿ ಗ್ರಾಮದಲ್ಲಿ ಸುಮಾರು 26 ಎಕರೆ ಜಾಗದಲ್ಲಿ ಕೋಸ್ಟ್ ಗಾರ್ಡ್ ಕಚೇರಿ ಮಾಡಲು ಜಾಗ ದೊರೆತಿದೆ. ಸುಮಾರು 140 ಕೋಟಿ ರೂ. ವೆಚ್ಚದಲ್ಲಿ ಕಚೇರಿ ನಿರ್ಮಾಣಕ್ಕೆ ಸರ್ಕಾರ ಮುಂದಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಕಚೇರಿ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದರು.
ಸಾರ್ವಜನಿಕರ ಸಹಕಾರ ಅಗತ್ಯ: ಕಾರವಾರ ತಾಲೂಕಿನಲ್ಲಿ ಕದಂಬ ನೌಕಾನೆಲೆ ಹಾಗೂ ಕೈಗಾ ಅಣು ವಿದ್ಯುತ್ ಸ್ಥಾವರವಿದ್ದು ಎರಡು ಬೃಹತ್ ಯೋಜನೆಗಳು ದೇಶಕ್ಕೆ ಸಾಕಷ್ಟು ಕೊಡುಗೆಯನ್ನು ನೀಡಿವೆ. ಇದಲ್ಲದೇ ಕಾರವಾರದ ಸೂಕ್ಷ್ಮ ಪ್ರದೇಶವಾಗಿರುವುದರಿಂದ ಇಂಡಿಯನ್ ಕೋಸ್ಟ್ ಗಾರ್ಡ್ ಸೇವೆ ಸಾಕಷ್ಟು ಅಗತ್ಯವಿತ್ತು. ಸದ್ಯ 26 ಎಕರೆ ಜಾಗದಲ್ಲಿ ಕಾರವಾರದಲ್ಲಿ ಕಚೇರಿ, ವಸತಿ ಸಂಕೀರ್ಣಗಳಾಗುತ್ತಿದ್ದು ಕಾರವಾರದಲ್ಲಿಯೇ ಸಿಬ್ಬಂದಿ ನೆಲೆಯೂರುವುದರಿಂದ ಕರಾವಳಿ ಭದ್ರತೆಗೆ ಇದು ಸಾಕಷ್ಟು ಸಹಕಾರಿಯಾಗಲಿದೆ. ಒಂದೂವರೆ ವರ್ಷದ ಒಳಗೆ ಕಾಮಗಾರಿ ಮುಗಿಯಲಿದ್ದು ಸಾರ್ವಜನಿಕರ ಸಹಕಾರ ಸಹ ಅಗತ್ಯವಿದೆ ಎನ್ನತ್ತಾರೆ ಪಶ್ಚಿಮ ವಲಯ ಕೋಸ್ಟ್ ಗಾರ್ಡ್ ಕಮಾಂಡರ್ ಮನೋಜ್ ಬಾಡ್ಕರ್.
ಸದ್ಯ ವಸತಿ ಸಂಕೀರ್ಣ ಹಾಗೂ ಕಚೇರಿಯ ಸ್ವಂತ ಕಟ್ಟಡ ನೀಡುತ್ತಿದ್ದು ಸರ್ಕಾರ ಕಡಲ ತೀರದಲ್ಲಿ ಜಾಗ ನೀಡಿದರೆ ಹೋವರ್ ಕ್ರಾಫ್ಟ್ ನಿಲುಗಡೆ ಹಾಗೂ ಕೋಸ್ಟ್ ಗಾರ್ಡ್ ಹೆಲಿಕಾಪ್ಟರ್ ನಿಲುಗಡೆ ತಾಣವನ್ನ ಸಹ ಮಾಡಲಾಗುವುದು ಎಂದು ಕೋಸ್ಟ್ ಗಾರ್ಡ್ ಅಧಿಕಾರಿಗಳು ಹೇಳಿದ್ದಾರೆ.
ಒಟ್ಟಿನಲ್ಲಿ ಕಾರವಾರದಲ್ಲಿ 14 ವರ್ಷಗಳ ನಂತರ ಕೋಸ್ಟ್ ಗಾರ್ಡ್ಗೆ ಸ್ವಂತ ಕಚೇರಿ ನಿರ್ಮಾಣವಾಗುತ್ತಿದೆ. ಈ ಮೂಲಕ ಕರಾವಳಿಯಲ್ಲಿ ಭದ್ರತೆ ಹೆಚ್ಚಾಗಲಿರುವುದು ಉತ್ತಮ ಬೆಳವಣಿಗೆಯಾಗಿದೆ.
ಇದನ್ನೂ ಓದಿ: ಕೋಸ್ಟ್ ಗಾರ್ಡ್ಗೆ ಕೊನೆಗೂ ದಕ್ಕಿದ ಜಟ್ಟಿ: ₹80 ಕೋಟಿ ವೆಚ್ಚದಲ್ಲಿ ನಿರ್ಮಾಣಕ್ಕೆ ತೀರ್ಮಾನ