ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕುಮಟಾ ವಿಧಾನಸಭೆ ಕ್ಷೇತ್ರ ಕಾಂಗ್ರೆಸ್ ಟಿಕೆಟ್ ಸಾಕಷ್ಟು ಕಗ್ಗಂಟಾಗಿತ್ತು. ವಿರೋಧದ ನಡುವೆ ಮಾಜಿ ರಾಜ್ಯಪಾಲೆ ಮಾರ್ಗರೇಟ್ ಆಳ್ವಾ ಪುತ್ರ ನಿವೇದಿತ್ ಆಳ್ವಾಗೆ ಟಿಕೆಟ್ ನೀಡಲಾಗಿತ್ತು. ಈಗ ಮಾಜಿ ಶಾಸಕಿ ಶಾರದಾ ಶೆಟ್ಟಿ ಚುನಾವಣೆಗೆ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದು, ಕುತೂಹಲಕ್ಕೆ ಕಾರಣವಾಗಿದೆ.
ರಾಜ್ಯದಲ್ಲಿ ಸದ್ಯ ಚುನಾವಣಾ ಕಾವು ರಂಗೇರಿದೆ. ಉತ್ತರ ಕನ್ನಡ ಜಿಲ್ಲೆಯ ಕುಮಟಾ ಕ್ಷೇತ್ರದಲ್ಲಿ ರಾಜಕೀಯ ದಿನೇ ದಿನೇ ರಂಗೇರುತ್ತಿದ್ದು, ಕಾಂಗ್ರೆಸ್ ಪಕ್ಷದಲ್ಲಿನ ಬಂಡಾಯ ಸಾಕಷ್ಟು ಸದ್ದು ಮಾಡುತ್ತಿದೆ. ಕ್ಷೇತ್ರದಲ್ಲಿ ಈ ಬಾರಿ ಟಿಕೆಟ್ಗಾಗಿ ಹದಿನಾಲ್ಕು ಜನ ಮುಖಂಡರು ಅರ್ಜಿ ಸಲ್ಲಿಸಿದ್ದರು. ಆದರೆ, ಕ್ಷೇತ್ರದವರಲ್ಲದ ಮಾಜಿ ರಾಜ್ಯಪಾಲೆ ಮಾರ್ಗರೇಟ್ ಆಳ್ವಾ ಪುತ್ರ ನಿವೇದಿತ್ ಆಳ್ವಾಗೆ ಟಿಕೆಟ್ ನೀಡಲಾಗಿತ್ತು. ಇದು ಕಾಂಗ್ರೆಸ್ ಪಕ್ಷದೊಳಗೆ ಭಿನ್ನಮತ ಸೃಷ್ಟಿ ಮಾಡಿತ್ತು. ಭಿನ್ನಮತ ಶಮನ ಮಾಡುವ ಪ್ರಯತ್ನಕ್ಕೆ ನಾಯಕರು ಒಂದೆಡೆ ಇಳಿದರ ಇನ್ನೊಂದೆಡೆ ಇದಕ್ಕೆ ಬಗ್ಗದ ಮಾಜಿ ಶಾಸಕಿ ಶಾರದಾ ಶೆಟ್ಟಿ ಪಕ್ಷೇತರವಾಗಿ ಈ ಬಾರಿ ನಾಮಪತ್ರ ಸಲ್ಲಿಸುವ ಮೂಲಕ ತಮ್ಮ ಪಕ್ಷದ ಅಭ್ಯರ್ಥಿ ವಿರುದ್ಧವೇ ತೊಡೆ ತಟ್ಟಿದ್ದಾರೆ.
ಈ ಬಗ್ಗೆ ಮಾಜಿ ಶಾಸಕಿ ಶಾರದಾ ಶೆಟ್ಟಿ ಮಾತನಾಡಿ "ಮಾಜಿ ಶಾಸಕಿಯಾಗಿ ಕಳೆದ ಐದು ವರ್ಷದಿಂದ ಕ್ಷೇತ್ರದ ಜನರೊಂದಿಗೆ ನಿಂತಿದ್ದೇನೆ. ನನ್ನೊಂದಿಗೆ 14 ಮಂದಿ ಇತರ ಟಿಕೆಟ್ ಆಕಾಂಕ್ಷಿಗಳು ಇದ್ದರು. ಆದರೆ ಎಲ್ಲರನ್ನು ಬಿಟ್ಟು ಹೊರಗಿನವರಿಗೆ ಟಿಕೆಟ್ ನೀಡಿದ್ದು ಬೇಸರವಾಗಿದೆ. ಇದೇ ಕಾರಣಕ್ಕೆ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯುತ್ತಿದ್ದೇನೆ. ನನ್ನೊಂದಿಗೆ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದ ಶಿವಾನಂದ ಹೆಗಡೆ ಕೂಡ ಇದೀಗ ನನಗೆ ಬೆಂಬಲ ನೀಡುವುದಾಗಿ ತಿಳಿಸಿದ್ದಾರೆ. ಜನ ಕೂಡ ಒತ್ತಾಯ ಮಾಡುತ್ತಿದ್ದು, ಪಕ್ಷೇತರ ಅಭ್ಯರ್ಥಿಯಾಗಿಯೇ ಗೆದ್ದು ಕ್ಷೇತ್ರದಲ್ಲಿ ಅಭಿವೃದ್ಧಿಗೆ ಶ್ರಮಿಸುವುದಾಗಿ ತಿಳಿಸಿದ್ದಾರೆ’’.
ಶಾರದಾ ಶೆಟ್ಟಿ ಬಂಡಾಯದ ಬಗ್ಗೆ ಮಾತನಾಡಿರುವ ಮಾರ್ಗರೇಟ್ ಆಳ್ವಾ, ’’ಮನೆಯಲ್ಲಿದ್ದ ಶಾರದಾ ಶೆಟ್ಟಿ ಅವರನ್ನು ತಂದು ಎರಡು ಬಾರಿ ಟಿಕೆಟ್ ಕೊಟ್ಟು ಎಂಎಲ್ಎ ಮಾಡಿದ್ದು ನಾನು. ಚುನಾವಣೆಗೆ ನಿಲ್ಲಲಿ. ಅವರು ಗೆದ್ದರೆ ಖುಷಿ ಪಡುತ್ತೇವೆ. ನಾವೆಲ್ಲರೂ ಪಕ್ಷದವರು. ಪಕ್ಷದ ಶಿಸ್ತು ಎಲ್ಲರಿಗೂ ಗೊತ್ತಿದೆ. ಅದರ ಮೇಲೆ ತೀರ್ಮಾನ ಮಾಡಿ ಟಿಕೆಟ್ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ನಮ್ಮದೇ ಸರ್ಕಾರ ಅಧಿಕಾರಕ್ಕೆ ಬರಲಿದೆ. ಆದರೆ ಇಂತಹ ಸಂದರ್ಭದಲ್ಲಿ ಪಕ್ಷ ಬಿಟ್ಟು ಹೊರಗೆ ಹೋಗುತ್ತಿರುವುದು ಸರಿಯಲ್ಲ. ಇದು ನ್ಯಾಯವೂ ಅಲ್ಲ‘‘ ಎಂದು ಹೇಳಿದರು.
ಸದ್ಯ ಬಂಡಾಯ ಎದ್ದಿರುವ ಮಾಜಿ ಶಾಸಕಿ ಶಾರದಾ ಶೆಟ್ಟಿ ಅವರನ್ನು ಮನವೊಲಿಸುವ ಕಾರ್ಯ ಸಹ ಮಾಡಲಾಗಿದೆ. ಇನ್ನು ನಾಮಪತ್ರ ಸಲ್ಲಿಕೆ ದಿನಾಂಕ ಮುಗಿದಿದ್ದು ನಾಮಪತ್ರ ವಾಪಾಸ್ ಪಡೆಯಲು ಎರಡು ದಿನ ಅವಕಾಶವಿದೆ. ಕುಮಟಾ ಕಾಂಗ್ರೆಸ್ನಲ್ಲಿ ಬಂಡಾಯ ಶಮನವಾಗಿ ಮಾಜಿ ಶಾಸಕಿ ನಾಮಪತ್ರ ವಾಪಸ್ ತೆಗೆದುಕೊಳ್ಳುತ್ತಾರೋ ಇಲ್ಲ, ಚುನಾವಣಾ ಕಣದಲ್ಲಿ ಮುಂದುವರಿಯುತ್ತಾರೋ ಎನ್ನುವುದನ್ನು ಕಾದು ನೋಡಬೇಕಾಗಿದೆ.
ಇದನ್ನೂ ಓದಿ: ಸವದತ್ತಿ ಯಲ್ಲಮ್ಮ: ರತ್ನಾ ಮಾಮನಿಗೆ ಬಿಗ್ ರಿಲೀಫ್... ನಾಮಪತ್ರ ಅಂಗೀಕಾರ