ಕಾರವಾರ: ಜನರಿಗೆ ಪಡಿತರ ಪೂರೈಕೆ ಮಾಡುವ ನಿಟ್ಟಿನಲ್ಲಿ ರಾಜ್ಯದ ಪ್ರತಿ ಜಿಲ್ಲೆಗಳಲ್ಲೂ ಸರ್ಕಾರವೇ ಉಗ್ರಾಣವನ್ನು ನಿರ್ಮಾಣ ಮಾಡಿ ನಿರ್ವಹಣೆ ಮಾಡುತ್ತಿದೆ. ಆದರೆ, ಇಲ್ಲೊಂದು ಕಡೆ ಸರ್ಕಾರಿ ಉಗ್ರಾಣವಿದ್ದರೂ ಸಹ ಖಾಸಗಿ ಉಗ್ರಾಣದಲ್ಲಿ ಪಡಿತರವನ್ನು ಸಂಗ್ರಹಣೆ ಮಾಡುತ್ತಿದ್ದು, ಅಧಿಕಾರಿಗಳ ಈ ನಡೆ ಇದೀಗ ಹಲವು ಅನುಮಾನಗಳಿಗೆ ಕಾರಣವಾಗಿದೆ.
ಉತ್ತರಕನ್ನಡ ಜಿಲ್ಲೆಯ ಕಾರವಾರ ನಗರದ ಬೈತಖೋಲ ಬಂದರು ಪ್ರದೇಶದಲ್ಲಿ ರಾಜ್ಯ ಸರ್ಕಾರದ ಸ್ವಂತ ಉಗ್ರಾಣ ಕಟ್ಟಡ ಇದ್ದರೂ ಕೂಡ ನಗರದಿಂದ ಸುಮಾರು 20 ಕಿ.ಮೀ ದೂರದ ಸಿದ್ಧರ ಗ್ರಾಮದ ಖಾಸಗಿ ಒಡೆತನದ ಉಗ್ರಾಣವನ್ನು ರಾಜ್ಯ ಆಹಾರ ನಿಗಮದ ಅಧಿಕಾರಿಗಳು ಬಾಡಿಗೆಗೆ ಪಡೆದುಕೊಂಡಿದ್ದಾರೆ. ಇದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. 1985ರಲ್ಲಿ ನಗರದ ಬೈತಖೋಲದಲ್ಲಿ ಬಂದರು ಇಲಾಖೆಯ 2.2 ಎಕರೆ ಜಾಗವನ್ನು ರಾಜ್ಯ ಆಹಾರ ನಿಗಮ ಲೀಸ್ಗೆ ಪಡೆದುಕೊಂಡಿದೆ. ಅದೇ ಜಾಗದಲ್ಲಿ ಸುಮಾರು 5 ಸಾವಿರ ಮೆಟ್ರಿಕ್ ಟನ್ ಸಾಮರ್ಥ್ಯದ ಗೋದಾಮನ್ನು ನಿರ್ಮಿಸಿದೆ.
ಕಳೆದ ಕೆಲ ವರ್ಷದಿಂದ ಬಂದರುಗಳ ಮೂಲಕ ಆಮದು ಸ್ಥಗಿತಗೊಂಡಿದ್ದರೂ ಸಹ ಇದೇ ಉಗ್ರಾಣದಿಂದ ಆಹಾರ ಧಾನ್ಯಗಳನ್ನು ಜಿಲ್ಲೆಯ ಗೋದಾಮುಗಳಿಗೆ ಸರಬರಾಜು ಮಾಡಲಾಗುತ್ತಿತ್ತು. ಆದರೆ, ಮೂರು ವರ್ಷದಿಂದ ಸರ್ಕಾರಿ ಗೋದಾಮು ಪಾಳು ಬಿದ್ದಿದೆ. ಇದೀಗ ನಗರದಿಂದ ಹೊರಗಿರುವ ಸಿದ್ಧರ ಗ್ರಾಮದಲ್ಲಿ ಖಾಸಗಿ ಉಗ್ರಾಣವನ್ನು ಬಾಡಿಗೆಗೆ ಪಡೆದುಕೊಂಡು ಅಲ್ಲಿ ರೈಲಿನ ಮೂಲಕ ಬರುವ ಧಾನ್ಯಗಳನ್ನು ಸಂಗ್ರಹಿಸಲಾಗುತ್ತಿದೆ. ಇದರಿಂದ ಸರ್ಕಾರಿ ಗೋದಾಮು ಪಾಳು ಬಿದ್ದಿದ್ದು, ಸ್ವಂತ ಕಟ್ಟಡವಿದ್ದರೂ ಲಕ್ಷಾಂತರ ರೂ. ಬಾಡಿಗೆ ನೀಡಿ ಸುಮ್ಮನೆ ಸರ್ಕಾರಿ ಹಣ ವ್ಯಯಿಸಲಾಗುತ್ತಿದೆ ಎನ್ನುವುದು ಸಾರ್ವಜನಿಕರ ಆರೋಪ.
ಈ ಬಗ್ಗೆ ಅಧಿಕಾರಿಗಳನ್ನು ಕೇಳಿದರೆ, 13 ಸಾವಿರ ಮೆಟ್ರಿಕ್ ಟನ್ ಸಾಮರ್ಥ್ಯದ ಸಿದ್ಧರ ಗ್ರಾಮದಲ್ಲಿರುವ ಬಾಡಿಗೆ ಪಡೆದ ಗೋದಾಮು ಹೊಸದಾಗಿದೆ. ಸರ್ಕಾರಿ ಗೋದಾಮು ಚಿಕ್ಕದಾಗಿದ್ದು ಹಳೆಯದಾಗಿರುವುದರಿಂದ ಖಾಸಗಿ ಗೋದಾಮು ಬಾಡಿಗೆಗೆ ಪಡೆದುಕೊಳ್ಳಲಾಗಿದೆ ಎನ್ನುತ್ತಾರೆ.
ಸದ್ಯ ಬೈತಖೋಲದಲ್ಲಿರುವ ಸರ್ಕಾರಿ ಉಗ್ರಾಣದ ಪಕ್ಕದಲ್ಲೇ ಬಂದರು ಇಲಾಖೆಗೆ ಸೇರಿದ ಉಗ್ರಾಣ ಸಹ ಇದ್ದು ಎರಡು ಕೂಡ ಸೂಕ್ತ ನಿರ್ವಹಣೆ ಇಲ್ಲದೆ ಅನೈತಿಕ ಚಟುವಟಿಕೆಗಳ ತಾಣವಾಗಿದೆ. ನಗರಕ್ಕೆ ಸಮೀಪದಲ್ಲೇ ಸರ್ಕಾರಿ ಉಗ್ರಾಣ ಇದ್ದರೂ ಖಾಸಗಿಯವರಿಗೆ ಲಕ್ಷಾಂತರ ರೂ. ಬಾಡಿಗೆ ವ್ಯಯಿಸುತ್ತಿರುವ ಅಧಿಕಾರಿಗಳ ಕ್ರಮಕ್ಕೆ ವಿರೋಧ ವ್ಯಕ್ತವಾಗಿದೆ.