ಕಾರವಾರ: ಆಳಸಮುದ್ರ ಮೀನುಗಾರಿಕೆಗೆ ತೆರಳಿದ ಬೋಟ್ ಒಂದು ಇಂಜಿನ್ ಕೆಟ್ಟು ಸಂಪರ್ಕಕ್ಕೆ ಸಿಗದೇ ನಾಪತ್ತೆಯಾಗಿತ್ತು. ಅದೃಷ್ಟವಶಾತ್ ಅದರಲ್ಲಿದ್ದ ಐವರು ಮೀನುಗಾರರು ಸುರಕ್ಷಿತವಾಗಿ ಬಂದರಿಗೆ ಮರಳಿದ್ದಾರೆ.
ಕಾರವಾರ ತಾಲೂಕಿನ ಮುದಗಾ ಗ್ರಾಮದ ಬಂದರಿನಿಂದ ತೆರಳಿದ್ದ ಶ್ರೀ ಗುಡಿದೇವ ಹೆಸರಿನ ಬೋಟು ಸುರಕ್ಷಿತವಾಗಿ ವಾಪಸ್ ಆಗಿದೆ. ಐದು ಮಂದಿ ಮೀನುಗಾರರಿದ್ದ ಬೋಟ್ ಬುಧವಾರ ಬೆಳಗ್ಗೆ ಆಳಸಮುದ್ರ ಮೀನುಗಾರಿಕೆಗೆ ತೆರಳಿತ್ತು. ಈ ವೇಳೆ ಬೋಟಿನ ಇಂಜಿನ್‌ನಲ್ಲಿ ದೋಷ ಕಾಣಿಸಿಕೊಂಡು ನಿಂತಿದ್ದು ಮೀನುಗಾರರು ಸಹಾಯಕ್ಕಾಗಿ ಕೇಳಿಕೊಂಡಿದ್ದರು. ರಾತ್ರಿ 10:30 ರ ವರೆಗೆ ಬೋಟಿನಲ್ಲಿದ್ದ ಮೀನುಗಾರರು ಸಂಪರ್ಕದಲ್ಲಿದ್ದು ಬಳಿಕ ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಹೀಗಾಗಿ ಬೋಟ್ ಮಾಲಿಕರು ಹಾಗೂ ಕುಟುಂಬಸ್ಥರು ಆತಂಕಗೊಂಡಿದ್ದರು.
ಬೋಟಿನ ಹುಡುಕಾಟಕ್ಕೆ ಮೀನುಗಾರರು ಮುಂದಾಗಿದ್ದ ವೇಳೆ ನಾಪತ್ತೆಯಾಗಿದ್ದ ಬೋಟು ಹಾಗೂ ಮೀನುಗಾರರು ಸುರಕ್ಷಿತವಾಗಿ ಬಂದರಿಗೆ ವಾಪಸ್ ಆಗಿದ್ದು, ಗೋವಾ ರಾಜ್ಯದ ಲಿಬಿಯಾ ಮೀನುಗಾರರ ಸಹಾಯದಿಂದ ಬೋಟನ್ನು ಸರಿಪಡಿಸಲಾಯಿತು ಎಂದು ಮೀನುಗಾರರು ತಿಳಿಸಿದ್ದಾರೆ.