ಕಾರವಾರ: ಇಲ್ಲಿನ ಕಡಲತೀರ ವ್ಯಾಪ್ತಿಯಲ್ಲಿ ನಿಷೇಧಿತ ಬೆಳಕು ಮೀನುಗಾರಿಕೆ ನಡೆಸುತ್ತಿದ್ದ ಗೋವಾದ ಎರಡು ಬೋಟ್ ಸಹಿತ 39 ಮೀನುಗಾರರನ್ನು ವಶಕ್ಕೆ ಪಡೆಯಲಾಗಿದೆ.
ಗೋವಾದ ಬೇತುಲ್ ಮೂಲದ ಕಾನ್ಸಿಪ್ ಹಾಗೂ ಸೀ ರೋಪ್ ಎಂಬ ಹೆಸರಿನ ಎರಡು ಬೋಟ್ ಹಾಗೂ ಅಂಕೋಲಾದ ಹಾರವಾಡ ಮೂಲದ ನಾಲ್ವರು ಮತ್ತು ಕಾರವಾರದ ಕೋಡಿಭಾಗದ ಇಬ್ಬರು ಮೀನುಗಾರರು ಸಹಿತ ಹೊರ ರಾಜ್ಯದ 33 ಮೀನುಗಾರರನ್ನು ಕರಾವಳಿ ಕಾವಲು ಪಡೆ ಪೊಲೀಸರು ಸೋಮವಾರ ತಡರಾತ್ರಿ ವಶಕ್ಕೆ ಪಡೆದಿದ್ದಾರೆ.
ಬೋಟ್ಗಳನ್ನು ನಗರದ ಬೈತಖೋಲ್ ಬಂದರಿಗೆ ತಂದಿರುವ ಪೊಲೀಸರು ಮೀನುಗಾರಿಕಾ ಇಲಾಖೆ ಅಧಿಕಾರಿಗಳ ವಶಕ್ಕೆ ನೀಡಿದ್ದಾರೆ. ಅಕ್ರಮ ಮೀನುಗಾರಿಕೆಗೆ ಬಳಸಿದ ಬೋಟ್, ಲೈಟ್ಸ್, ಜನರೇಟರ್‌ಗಳನ್ನು ವಶಕ್ಕೆ ಪಡೆದಿರುವ ಅಧಿಕಾರಿಗಳು ಎಲ್ಲ ಕಾರ್ಮಿಕರನ್ನು ಬೋಟ್ನಲ್ಲೇ ಕೋವಿಡ್ ತಪಾಸಣೆಗೆ ಒಳಪಡಿಸಿದ್ದಾರೆ.
ಕಳೆದ ಕೆಲ ದಿನಗಳ ಹಿಂದೆಯೂ ಅಕ್ರಮ ಬೆಳಕು ಮೀನುಗಾರಿಕೆ ನಡೆಸಿದ ಎರಡು ಬೋಟ್ ಸಹಿತ 29 ಕಾರ್ಮಿಕರನ್ನು ವಶಕ್ಕೆ ಪಡೆಯಲಾಗಿತ್ತು.