ಕಾರವಾರ : ಮೀನುಗಾರಿಕೆಗೆ ತೆರಳಿದ್ದ ನಾಡದೋಣಿ ಮುಳುಗಡೆಯಾಗಿ ಓರ್ವ ಮೀನುಗಾರ ನಾಪತ್ತೆಯಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ಬಳಿಯ ಅರಬ್ಬೀ ಸಮುದ್ರದಲ್ಲಿ ನಡೆದಿದೆ.
ಹೊನ್ನಾವರ ತಾಲೂಕಿನ ಕಾಸರಕೋಡು ಇಕೋ ಬೀಚ್ ಬಳಿ ಇಂದು ಬೆಳಗ್ಗೆ ಈ ಅವಘಡ ಸಂಭವಿಸಿದೆ. ಬೋಟ್ನಲ್ಲಿದ್ದ ಮೂವರು ಮೀನುಗಾರರನ್ನು ಸ್ಥಳೀಯರು ರಕ್ಷಣೆ ಮಾಡಿದ್ದಾರೆ. ನಾಪತ್ತೆಯಾದ ಮೀನುಗಾರನನ್ನು ಉದಯ್ ದಾಮೋದರ್ ತಾಂಡೇಲ್ ಎಂದು ಗುರುತಿಸಲಾಗಿದೆ. ಈತನೊಂದಿಗೆ ತೆರಳಿದ್ದ ವಿಜಯ್ ಕ್ರಿಸ್ತಾದಾಸ್ ಫರ್ನಾಂಡಿಸ್, ಶಂಕರ್ ತಾಂಡೇಲ್, ಕಾಮೇಶ್ವರ್ ತಾಂಡೇಲ್‌ನನ್ನು ರಕ್ಷಣೆ ಮಾಡಲಾಗಿದೆ.
ಎಂದಿನಂತೆ ಇಂದು ಬೆಳಗ್ಗೆ ಕಾಸರಕೋಡು ಭಾಗದಿಂದ ಮೀನುಗಾರಿಕೆಗೆ ತೆರಳಿದ್ದ ದೋಣಿಯು ಇಕೋ ಬೀಚ್ ಬಳಿ ಅಲೆಗಳ ಹೊಡೆತಕ್ಕೆ ಸಿಲುಕಿ ಮುಳುಗಡೆಯಾಗಿದೆ.
ಈ ವೇಳೆ ಮೂರು ಮಂದಿ ಮೀನುಗಾರರು ಈಜಿ ದಡಕ್ಕೆ ಬಂದಿದ್ದು, ಸ್ಥಳೀಯ ಮೀನುಗಾರರು ರಕ್ಷಣೆ ಮಾಡಿದ್ದಾರೆ. ಓರ್ವ ಮೀನುಗಾರ ನಾಪತ್ತೆಯಾಗಿದ್ದಾನೆ. ಆತನಿಗಾಗಿ ಶೋಧ ಕಾರ್ಯ ಮುಂದುವರೆದಿದೆ. ಈ ಸಂಬಂಧ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.