ಕಾರವಾರ: ಕೊರೊನಾ ವಕ್ಕರಿಸಿದ ಪರಿಣಾಮ ಕಳೆದೆರಡು ತಿಂಗಳಿನಿಂದ ಮೀನುಗಾರಿಕೆ ಸಂಪೂರ್ಣ ಸ್ಥಗಿತಗೊಂಡಿತ್ತು. ಆದರೀಗ ಅನುಮತಿ ನೀಡಿದರೂ ಮೀನುಗಾರಿಕೆ ನಡೆಸಲಾಗದ ಪರಿಸ್ಥಿತಿ ಎದುರಾಗಿದೆ.
ಮೀನುಗಾರರ ಕಷ್ಟವನ್ನು ಅರಿತ ಸರ್ಕಾರ ಮೀನುಗಾರಿಕೆ ಅವಧಿಯನ್ನು 14 ದಿನಗಳವರೆಗೆ ವಿಸ್ತರಣೆ ಮಾಡಿತ್ತು. ಉತ್ತರಕನ್ನಡ ಜಿಲ್ಲೆಯ ಕರಾವಳಿಯಲ್ಲಿ ಈ ಬಾರಿ ಮೀನುಗಾರಿಕೆಗೆ ತೆರಳಿದರೂ ಮೀನು ಸಿಗುವುದು ಸಾಧ್ಯವಿಲ್ಲವಾದ್ದರಿಂದ ಮೀನುಗಾರರ ಪರಿಸ್ಥಿತಿ ಹೇಳತೀರದಾಗಿದೆ.
ಕಾರವಾರದ ಬೈತಖೋಲ ಬಂದರಿನಲ್ಲಿ 200ಕ್ಕೂ ಅಧಿಕ ಯಾಂತ್ರಿಕ ಮೀನುಗಾರಿಕಾ ಬೋಟುಗಳಿದ್ದು ಸಾವಿರಾರು ಮಂದಿ ಮೀನುಗಾರಿಕೆಯನ್ನೇ ನಂಬಿಕೊಂಡು ಜೀವನ ನಡೆಸುತ್ತಿದ್ದಾರೆ. ಆದರೆ ಸಾಲ ಮಾಡಿ ಮೀನುಗಾರಿಕೆ ಪ್ರಾರಂಭಿಸಿದ ಮೀನುಗಾರರ ಹೊಟ್ಟೆಗೆ ಕೊರೊನಾ ಹೊಡೆದಿದೆ. ಜೂನ್ ತಿಂಗಳಲ್ಲಿ 14 ದಿನಗಳ ಕಾಲ ಮೀನುಗಾರಿಕೆ ನಡೆಸಲು ಅವಕಾಶ ನೀಡಿದರೂ ಯಾರಿಗೂ ಪ್ರಯೋಜನವಾಗುತ್ತಿಲ್ಲ ಎನ್ನುತ್ತಾರೆ ಮೀನುಗಾರರು.
ಮೀನುಗಾರಿಕಾ ಬೋಟುಗಳಲ್ಲಿ ಕೆಲಸ ಮಾಡುವ ಕಾರ್ಮಿಕರಲ್ಲಿ ಬಹುತೇಕರು ಹೊರರಾಜ್ಯದವರಾಗಿದ್ದು ಈಗ ಎಲ್ಲರೂ ತಮ್ಮ ತಮ್ಮ ಊರುಗಳಿಗೆ ತೆರಳಿದ್ದಾರೆ. ಇದೀಗ ಮೀನುಗಾರಿಕೆಗೆ ಅವಕಾಶ ನೀಡಿದ್ದರೂ ಸಹ ಬೋಟುಗಳಲ್ಲಿ ಬಲೆ ಎಳೆಯುವ ಕಾರ್ಯಕ್ಕೆ ಕಾರ್ಮಿಕರು ಸಿಗದಿರುವುದರಿಂದ ಯಾಂತ್ರೀಕೃತ ಬೋಟುಗಳು ಮೀನುಗಾರಿಕೆಗೆ ತೆರಳಲು ಸಾಧ್ಯವಿಲ್ಲ. ಅಲ್ಲದೇ ಅರಬ್ಬಿ ಸಮುದ್ರದಲ್ಲಿ ಇದೀಗ ಚಂಡಮಾರುತ ಉಂಟಾಗಿದ್ದು ಮಳೆಯ ಭೀತಿ ಹಿನ್ನೆಲೆಯಲ್ಲಿ ಯಾರೂ ಕೂಡಾ ಸಹ ಸಮುದ್ರದತ್ತ ಸುಳಿಯುತ್ತಿಲ್ಲ.
ಇದೀಗ ಮೀನುಗಳು ಮೊಟ್ಟೆ ಇಡುವ ಸಂದರ್ಭವಾಗಿದ್ದು, ಈಗ ಮೀನುಗಾರಿಕೆ ನಡೆಸಿದ್ದಲ್ಲಿ ಮೀನು ಸಂತತಿ ನಾಶಮಾಡಿದಂತಾಗುತ್ತದೆ. ಹೀಗಾಗಿ ಆಗಸ್ಟ್ 1 ರಂದು ಮೀನುಗಾರಿಕೆ ಮರು ಪ್ರಾರಂಭವಾಗುವ ಮೊದಲು ಜುಲೈ ತಿಂಗಳ ಕೊನೆಯ ವಾರದಲ್ಲೇ ಅವಕಾಶ ನೀಡಿ ಅನ್ನೋದು ಮೀನುಗಾರರ ಒತ್ತಾಯ.