ಕಾರವಾರ(ಉತ್ತರ ಕನ್ನಡ): ಮೀನುಗಾರಿಕೆಗೆ ತೆರಳಿದ್ದ ಬೋಟ್ವೊಂದು ಅರಬ್ಬಿ ಸಮುದ್ರದಲ್ಲಿ ಮುಳುಗಿದ್ದು, ಅದರಲ್ಲಿದ್ದ 30 ಮಂದಿ ಮೀನುಗಾರರನ್ನು ರಕ್ಷಣೆ ಮಾಡಿ ಬೈತಖೋಲ ಬಂದರಿಗೆ ಕರೆತರಲಾಗಿತ್ತು. ಈ ವೇಳೆ ಬೋಟ್ನಲ್ಲಿದ್ದ ಸುಮಾರು 30 ಟನ್ ಮೀನುಗಳನ್ನು ಸಮುದ್ರಕ್ಕೆ ಎಸೆಯಲಾಗಿತ್ತು. ಇದೀಗ ಆ ಸತ್ತ ಮೀನುಗಳು ಕಡಲತೀರದುದ್ದಕ್ಕೂ ಬಿದ್ದಿದ್ದು, ಗಬ್ಬು ನಾರುತ್ತಿದೆ.
ಕಾರವಾರ ಸಮೀಪದ ಅರಬ್ಬೀ ಸಮುದ್ರದಲ್ಲಿ ಶಿಕಾರಿ ಮಾಡಿ ಸುಮಾರು 30 ಟನ್ ಮೀನುಗಳನ್ನು ತುಂಬಿಕೊಂಡು ಬರುತ್ತಿದ್ದ ಬೋಟ್ ಸೋಮವಾರ ಮುಳುಗಡೆಯಾಗಿತ್ತು. ಅದನ್ನು ಬಂದರಿಗೆ ಎಳೆದು ತರಲು ಮೀನುಗಾರರು ಬೋಟ್ನಲ್ಲಿದ್ದ ಮೀನುಗಳನ್ನು ಸಮುದ್ರಕ್ಕೆ ಎಸೆದಿದ್ದರು. ಆದರೆ ಈ ಮೀನುಗಳೆಲ್ಲ ಸತ್ತು ಇದೀಗ ದಡಕ್ಕೆ ತೇಲಿಬಂದಿವೆ.
ಸುಮಾರು ನಾಲ್ಕು ಕಿಲೋ ಮೀಟರ್ ಉದ್ದದ ಕಾರವಾರದ ಟ್ಯಾಗೋರ್ ಕಡಲತೀರಕ್ಕೆ ಪ್ರತಿದಿನ ವಾಯುವಿವಾರಕ್ಕೆ ನೂರಾರು ಜನ ಬರುತ್ತಾರೆ. ಆದರೆ ಇದೀಗ ದಡದಲ್ಲಿ ಸತ್ತ ಮೀನುಗಳ ರಾಶಿ ಕಂಡು, ಅದರ ದುರ್ವಾಸನೆ ತಡೆಯಲಾರದೆ ಜನ ಮೂಗು ಮುಚ್ಚಿಕೊಂಡು ಹೋಗುವಂತಾಗಿದೆ. ಅಲ್ಲದೇ ಕಾಗೆ, ಹದ್ದುಗಳು ದಡದಲ್ಲಿ ಸತ್ತು ಬಿದ್ದಿರುವ ಮೀನುಗಳಿಗಾಗಿ ಗುಂಪು ಕಟ್ಟಿಕೊಂಡು ಮುತ್ತಿಗೆ ಹಾಕುತ್ತಿವೆ.
ಇದನ್ನೂ ಓದಿ: ಮುಳುಗುತ್ತಿದ್ದ ಬೋಟ್ನಿಂದ 30 ಮೀನುಗಾರರ ರಕ್ಷಣೆ: ಹಿಡಿದ ಮೀನು ಸಮುದ್ರಕ್ಕೆ!