ಕಾರವಾರ: ಉತ್ತರಕನ್ನಡ ಜಿಲ್ಲಾ ಸಹಕಾರ ಮೀನು ಮಾರಾಟ ಫೆಡರೇಶನ್ ನಿರ್ದೇಶಕರ ಸ್ಥಾನಕ್ಕೆ ಚುನಾವಣೆ ನಡೆಯುತ್ತಿದ್ದು, ಇಂದೇ ಫಲಿತಾಂಶ ಪ್ರಕಟವಾಗುವ ಕಾರಣ ಕರಾವಳಿಯಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
ಫೆಡರೇಶನ್ನ ಒಟ್ಟು 15 ನಿರ್ದೇಶಕ ಸ್ಥಾನಗಳ ಪೈಕಿ 6 ಸ್ಥಾನಗಳು ಅವಿರೋಧವಾಗಿ ಆಯ್ಕೆಯಾಗಿದೆ. ಇನ್ನುಳಿದ 9 ಸ್ಥಾನಗಳ ಪೈಕಿ ಎರಡು ಖಾಲಿಯಿದ್ದು, 7 ಸ್ಥಾನಗಳಿಗೆ ಮತದಾನ ನಡೆಯುತ್ತಿದೆ. ನಗರದ ಕೊಡಿಭಾಗದ ಸಹಕಾರಿ ಮೀನು ಮಾರಾಟ ಫೆಡರೇಶನ್ ಸಭಾ ಭವನದಲ್ಲಿ ಎರಡು ಮತಗಟ್ಟೆಗಳನ್ನು ಸ್ಥಾಪಿಸಿದ್ದು ಬೆಳಿಗ್ಗೆ 9 ಗಂಟೆಯಿಂದ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದೆ.
ಒಟ್ಟು 534 ಸದಸ್ಯರು ಹಕ್ಕು ಚಲಾಯಿಸಲಿದ್ದು, ಬೆಳಿಗ್ಗೆಯಿಂದಲು ಚುರುಕಿನಿಂದ ಮತದಾನವಾಗುತ್ತಿದೆ. ಮೀನುಗಾರರ ಪ್ರತಿಷ್ಠಿತ ಫೆಡರೇಶನ್ ಚುನಾವಣೆಯಾದ ಕಾರಣ ವಿಧಾನ ಪರಿಷತ್ ಚುನಾವಣೆಗಿಂತಲೂ ಹೆಚ್ಚಿನ ಕಾವು ಪಡೆದುಕೊಂಡಿದೆ.
ಕರಾವಳಿಯ ಭಟ್ಕಳ, ಹೊನ್ನಾವರ, ಕುಮಟಾ, ಅಂಕೋಲಾದಿಂದ ಟೆಂಪೋ ಮೂಲಕ ಬರುವ ಸದಸ್ಯರು ಮತದಾನ ಮಾಡುತ್ತಿದ್ದಾರೆ. ಈ ಹಿಂದಿನ ಅಧ್ಯಕ್ಷ ಗಣಪತಿ ಮಾಂಗ್ರೆ ಹಾಗೂ ಮೀನುಗಾರರ ಮುಖಂಡ ರಾಜು ತಾಂಡೇಲ್ ನಡುವೆ ನಿರ್ದೇಶಕ ಸ್ಥಾನದ ಜೊತೆಗೆ ಅಧ್ಯಕ್ಷ ಪಟ್ಟಕ್ಕಾಗಿ ತೀವ್ರ ಹಣಾಹಣಿ ಏರ್ಪಟ್ಟಿದೆ. ಅಹಿತಕರ ಘಟನೆಗಳನ್ನು ತಡೆಯಲು ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿದೆ.