ಕಾರವಾರ: ದಶಕಗಳ ಹೋರಾಟದ ಬಳಿಕ ಮಂಜೂರಾಗಿದ್ದ ಅಘನಾಶಿನಿ ನದಿಗೆ ಸೇತುವೆ ಕಾಮಗಾರಿ ಇದೀಗ ಮೀನುಗಾರರಿಗೆ ಸಂಕಷ್ಟವೊಡ್ಡಿದೆ. ಗುತ್ತಿಗೆದಾರರ ಅವೈಜ್ಞಾನಿಕ ಕಾಮಗಾರಿಯಿಂದ ಮೀನುಗಾರಿಕೆಗೆ ಹೊಡೆತ ಬಿದ್ದಿದೆ.
ಉತ್ತರಕನ್ನಡ ಜಿಲ್ಲೆಯ ಕುಮಟಾ ತಾಲ್ಲೂಕಿನ ಕೋಡ್ಕಣಿಯಿಂದ ಐಗಳಕೂರ್ವೆ ದ್ವೀಪದ ಗ್ರಾಮಕ್ಕೆ ಸಂಪರ್ಕ ಕಲ್ಪಿಸಲು ಅಘನಾಶಿನಿ ನದಿಗೆ ಅಡ್ಡಲಾಗಿ ಸೇತುವೆ ಕಾಮಗಾರಿ ನಡೆಯುತ್ತಿದೆ. ಈ ಸ್ಥಳದಲ್ಲಿ ನದಿಗೆ ಮಣ್ಣು ತುಂಬಿ ಅವೈಜ್ಞಾನಿಕ ರೀತಿಯಲ್ಲಿ ಕಾಮಗಾರಿ ನಡೆಸುತ್ತಿರುವುದು ಮೀನುಗಾರಿಕೆಗೆ ಅಡ್ಡಿಯಾಗಿದೆ. ಪರಿಣಾಮ ನದಿ ಪಾತ್ರದಲ್ಲಿ ದೋಣಿಗಳನ್ನು ಲಂಗರು ಹಾಕಿ ನಿಲ್ಲಿಸಿರುವ ನೂರಾರು ಮೀನುಗಾರರು ಪರಿತಪಿಸುತ್ತಿದ್ದಾರೆ.
ಇಲ್ಲಿನ ಮಿರ್ಜಾನ್ ತಾರಿಬಾಗಿಲು ಗ್ರಾಮದ ಸುಮಾರು 200 ಕುಟುಂಬಗಳು ಅಘನಾಶಿನಿ ನದಿಯಲ್ಲಿ ಮೀನುಗಾರಿಕೆ ಮಾಡುವ ಮೂಲಕ ಜೀವನ ನಡೆಸುತ್ತಿವೆ. ಆದರೆ, ಮೀನುಗಾರಿಕೆಗೆ ತೆರಳುವ ಐಗಳಕೂರ್ವೆ ಕೋಡ್ಕಣಿ ನಡುವಿನ ಮಾರ್ಗವನ್ನು ಮಣ್ಣುತುಂಬಿದ ಮುಚ್ಚಿರುವುದರಿಂದ ದೋಣಿಗಳ ಓಡಾಟಕ್ಕೆ ತಡೆಬಿದ್ದಿದೆ. ಕಾಮಗಾರಿ ಆರಂಭವಾದ ಕಳೆದೆರಡು ತಿಂಗಳಿನಿಂದಲೂ ಮೀನುಗಾರಿಕೆ ಸಂಪೂರ್ಣ ಸ್ಥಗಿತಗೊಂಡಿದೆ.
ನದಿಯಲ್ಲಿ ದೋಣಿಗಳ ಓಡಾಟಕ್ಕೆ 100 ಮೀಟರ್ ಜಾಗ ಬಿಟ್ಟು, ಉಳಿದೆಡೆ ಮಣ್ಣು ತುಂಬೋದಾಗಿ ಕಾಮಗಾರಿ ಟೆಂಡರ್ ಪಡೆದಿದ್ದ ಡಿ.ಎನ್.ಇನ್‌ಫ್ರಾಸ್ಟ್ರಕ್ಚರ್ ಕಂಪನಿಯ ಗುತ್ತಿಗೆದಾರರು ಹೇಳಿದ್ದರು. ಆದರೆ, ಇದೀಗ ಸಂಪೂರ್ಣವಾಗಿ ನದಿಗೆ ಅಡ್ಡಲಾಗಿ ಮಣ್ಣು ತುಂಬಿದ್ದಾರೆ. ಈ ಬಗ್ಗೆ ಪ್ರಶ್ನಿಸಿದರೆ ಗುತ್ತಿಗೆದಾರರು ಕ್ಯಾರೆ ಎನ್ನುತ್ತಿಲ್ಲ. ಅಧಿಕಾರಿಗಳಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥ ಗಣೇಶ ಅಂಬಿಗ ನೋವು ತೋಡಿಕೊಂಡರು.
ಮೀನುಗಾರ ಮಹಿಳೆಯರು ಇದೇ ನದಿಯಲ್ಲಿ ಚಿಪ್ಪಿಕಲ್ಲಿನಂತಹ ಸಮುದ್ರದ ಉತ್ಪನ್ನಗಳನ್ನು ತೆಗೆದು ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದರು. ಆದರೆ, ಅವೈಜ್ಞಾನಿಕ ಕಾಮಗಾರಿಯು ಮೀನುಗಾರಿಕೆಯನ್ನೇ ಅವಲಂಬಿಸಿದ್ದ ಕುಟುಂಬಗಳು ಬೀದಿಗೆ ಬೀಳುವಂತ ಪರಿಸ್ಥಿತಿ ಉಂಟುಮಾಡಿದೆ.
ಗುತ್ತಿಗೆದಾರರು ಮಾಸೂರು ಗ್ರಾಮದ ಮಾರ್ಗದಲ್ಲಿ ತೆರಳುವಂತೆ ಮೀನುಗಾರರಿಗೆ ಹೇಳುತ್ತಿದ್ದಾರೆ. ಆದರೆ, ಆ ಮಾರ್ಗದಲ್ಲಿ ಸಂಚರಿಸಲು ಪ್ರತಿನಿತ್ಯ ಏಳೆಂಟು ಕಿಲೋ ಮೀಟರ್ ಸುತ್ತುವರೆದು ಸಾಗಬೇಕಾಗುತ್ತದೆ. ಇದರಿಂದ ಹೆಚ್ಚಿನ ಸಮಯ ವ್ಯರ್ಥವಾಗುವುದಲ್ಲದೇ ನೀರಿನ ಹರಿವು ಹೆಚ್ಚಾಗಿರುವುದರಿಂದ ಜೀವವನ್ನು ಕೈಯಲ್ಲಿ ಹಿಡಿದು ಸಾಗಬೇಕಾದ ಪರಿಸ್ಥಿತಿ ಇದೆ. ಹೀಗಾಗಿ ದೋಣಿಗಳ ಓಡಾಟಕ್ಕೆ ಅನುಕೂಲವಾಗುವಂತೆ ಒಂದು ಬದಿಗೆ ಮಣ್ಣು ತೆರವು ಮಾಡಬೇಕು ಅನ್ನೋದು ಮೀನುಗಾರರ ಬೇಡಿಕೆ.