ಕಾರವಾರ: ಮೀನುಗಾರಿಕೆಗೆ ತೆರಳಿದ್ದ ಬೋಟ್ಗೆ ಆಕಸ್ಮಿಕ ಬೆಂಕಿ ತಗುಲಿ ಬೋಟ್ ಭಾಗಶಃ ಸುಟ್ಟು ಕರಕಲಾಗಿದೆ. ಅದೃಷ್ಟವಶಾತ್ ಬೋಟ್ನಲ್ಲಿದ್ದ ಏಳು ಮಂದಿ ಮೀನುಗಾರರರನ್ನು ಇನ್ನೊಂದು ಬೋಟ್ನಲ್ಲಿದ್ದವರು ರಕ್ಷಣೆ ಮಾಡಿರುವ ಘಟನೆ ಕಾರವಾರ ಸಮೀಪದ ಅರಬ್ಬಿ ಸಮುದ್ರದಲ್ಲಿ ನಡೆದಿದೆ.
ಮಲ್ಪೆ ಮೂಲದ ವರದ ವಿನಾಯಕ ಎಂಬ ಬೋಟ್ ಮೀನುಗಾರಿಕೆ ನಡೆಸುತ್ತಾ ಕಾರವಾರ ಸಮೀಪ ಬಂದಾಗ ಬೋಟ್ನ ಇಂಜಿನ್ ರೂಮ್ನಲ್ಲಾದ ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಕಾಣಿಸಿಕೊಂಡಿತ್ತು. ನೋಡ ನೋಡುತ್ತಿದ್ದಂತೆ ಬೆಂಕಿಯ ಜ್ವಾಲೆ ಹೆಚ್ಚಾಗಿತ್ತು. ತಕ್ಷಣ ಸಮೀಪದಲ್ಲಿಯೇ ಇದ್ದ ವರದರಾಜ ಬೋಟ್ ನವರು ಏಳು ಮಂದಿ ಮೀನುಗಾರರನ್ನು ರಕ್ಷಣೆ ಮಾಡಿದ್ದಾರೆ.
ಇದನ್ನೂ ಓದಿ: ದಿಢೀರ್ ಶ್ರೀಮಂತರಾಗಲು ಅಡ್ಡದಾರಿ.. ಕಿಡ್ನಾಪ್ ನೆಪದಲ್ಲಿ ಮಾಲೀಕನ ಮಗನ ಉಸಿರು ನಿಲ್ಲಿಸಿದ ಕಿರಾತಕರು ಅರೆಸ್ಟ್
ಬಳಿಕ ಎರಡು ಬೋಟ್ನ ಮೀನುಗಾರರು ಬೆಂಕಿಯನ್ನು ನಂದಿಸಿದ್ದರಾದರೂ ಬೋಟ್ ಭಾಗಶಃ ಸುಟ್ಟಿದ್ದರಿಂದ ಲಕ್ಷಾಂತರ ರೂಪಾಯಿ ಹಾನಿಯಾಗಿದೆ. ಸದ್ಯ ಕಾರವಾರದ ಬೈತಖೋಲ್ ಬಂದರಿಗೆ ಬೋಟ್ ಅನ್ನು ಎಳೆದು ತರಲಾಗಿದೆ.