ಕಾರವಾರ : ಭಟ್ಕಳದ ಕಡುವಿನಕಟ್ಟೆ ಡ್ಯಾಂಗೆ ಈಜಲು ತೆರಳಿ ನಾಪತ್ತೆಯಾಗಿದ್ದ ನಗರದ ಉಮರ್ ಸ್ಟ್ರೀಟ್ 2ನೇ ಕ್ರಾಸ್ ನಿವಾಸಿ ಇಬ್ರಾಹಿಂ ಆಬೀದಾ (16) ಮೃತದೇಹ ಶಿರಾಲಿಯ ವೆಂಕಟಾಪುರ ನದಿಯಲ್ಲಿ ಶುಕ್ರವಾರ ಪತ್ತೆಯಾಗಿದೆ.
ಜೋರಾದ ಮಳೆ ಸುರಿಯುತ್ತಿದ್ದರೂ ಸ್ನೇಹಿತರೊಂದಿಗೆ ಇಲ್ಲಿನ ಕಡವಿನಕಟ್ಟಾ ಡ್ಯಾಮ್‌ಗೆ ಈಜಲು ತೆರಳಿದ್ದ ಇಬ್ರಾಹಿಂ ಆಬಿದಾ ಜುಲೈ 12ರಂದು ನಾಪತ್ತೆಯಾಗಿದ್ದ. ಉತ್ತಮ ಈಜುಗಾರನಾಗಿದ್ದರೂ ತುಂಬಿ ಹರಿಯುತ್ತಿದ್ದ ಡ್ಯಾಂನ ನೀರಿನ ಸೆಳೆತಕ್ಕೆ ಬಹುದೂರ ಹರಿದು ಹೋಗಿದ್ದ.
ನಾಪತ್ತೆ ಬಳಿಕ ಪೊಲೀಸ್ ಇಲಾಖೆ ಹಾಗೂ ಸ್ಥಳೀಯರು ಹಗಲು ರಾತ್ರಿ ಹುಡುಕಾಟ ನಡೆಸಿದ್ದರು. ಬಳಿಕ ಮಂಗಳೂರು ಹಾಗೂ ಮುರುಡೇಶ್ವರದ ಮುಳುಗು ತಜ್ಞರೂ ಸತತವಾಗಿ ಪ್ರಯತ್ನ ಪಟ್ಟರು ಸಿಕ್ಕಿರಲಿಲ್ಲ. ಶುಕ್ರವಾರ ಶಿರಾಲಿಯ ವೆಂಕಟಾಪುರ ನದಿಯಲ್ಲಿ ಮೃತದೇಹ ಹೊರ ಬಂದಿದೆ. ಬಳಿಕ ಸ್ಥಳೀಯರು ಮೃತದೇಹವನ್ನು ದಡಕ್ಕೆ ತಂದಿದ್ದು, ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಈ ಬಗ್ಗೆ ಭಟ್ಕಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.