ಕಾರವಾರ: ಉತ್ತರ ಕನ್ನಡಿಗರ ಬಹುಬೇಡಿಕೆಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕನಸಿಗೆ ಸರ್ಕಾರ ತಣ್ಣೀರೆರಚಿದೆ. ಕಾರವಾರದ ಕ್ರಿಮ್ಸ್ನಿಂದ ಕಳುಹಿಸಲಾಗಿದ್ದ ಆಸ್ಪತ್ರೆ ನಿರ್ಮಾಣ ಕುರಿತಾದ ಪ್ರಸ್ತಾವವನ್ನು ಆರ್ಥಿಕ ಇಲಾಖೆ ತಿರಸ್ಕರಿಸುವ ಮೂಲಕ ಬೇಡಿಕೆ ನಿರ್ಲಕ್ಷಿಸಿರುವುದು ಜಿಲ್ಲೆಯ ಜನರ ಅಸಮಾಧಾನಕ್ಕೆ ಕಾರಣವಾಗಿದೆ.
ದಶಕಗಳ ಬೇಡಿಕೆಯಾಗಿರುವ ಉತ್ತರ ಕನ್ನಡ ಜಿಲ್ಲೆಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಒತ್ತಾಯಿಸಿ ಕಳೆದ ಮೂರು ವರ್ಷಗಳಿಂದ ಹೋರಾಟ, ಪ್ರತಿಭಟನೆಗಳು ತೀವ್ರಗೊಂಡಿದ್ದವು. ಜಿಲ್ಲೆಯಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಮಾಡುವುದಾಗಿ ಸರ್ಕಾರ ಭರವಸೆ ನೀಡಿದ ನಂತರ ಕಾರವಾರದ ಕ್ರಿಮ್ಸ್ ವೈದ್ಯಕೀಯ ಕಾಲೇಜಿನಿಂದ ಆಸ್ಪತ್ರೆ ನಿರ್ಮಾಣಕ್ಕೆ ಪ್ರಸ್ತಾವನೆ ಕಳಿಸಲಾಗಿತ್ತು. ಆದರೆ, ಕಳುಹಿಸಿದ್ದ ಪ್ರಸ್ತಾವವನ್ನೇ ಆರ್ಥಿಕ ಇಲಾಖೆ ತಿರಸ್ಕರಿಸಿರುವುದು ಅಧಿವೇಶನದಲ್ಲಿ ಬೆಳಕಿಗೆ ಬಂದಿದೆ.
ಆಸ್ಪತ್ರೆ ಬೇಡಿಕೆಯ ಕುರಿತಂತೆ ಅಧಿವೇಶನದಲ್ಲಿ ಕಾರವಾರ ಶಾಸಕಿ ರೂಪಾಲಿ ನಾಯ್ಕ ಅವರು ಪ್ರಶ್ನಿಸಿದ್ದರು. ಉತ್ತರಕನ್ನಡ ಜಿಲ್ಲಾ ಕೇಂದ್ರದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಇಲ್ಲದಿರುವುದರಿಂದ ಸಾರ್ವಜನಿಕರು ಅನುಭವಿಸುತ್ತಿರುವ ತೊಂದರೆಗಳ ಬಗ್ಗೆ ಸರ್ಕಾರದ ಗಮನಕ್ಕೆ ಬಂದಿದೆಯಾ? ಎಂದು ಕೇಳಿದ್ದರು. ಇದಕ್ಕೆ ಆರೋಗ್ಯ ಸಚಿವ ಡಾ.ಸುಧಾಕರ್ ಪ್ರತಿಕ್ರಿಯೆ ನೀಡಿ, ಕಾರವಾರದ ಕ್ರಿಮ್ಸ್ ನಿರ್ದೇಶಕರಿಂದ ಸಲ್ಲಿಸಲಾದ ಪ್ರಸ್ತಾವವನ್ನು ಆರ್ಥಿಕ ಇಲಾಖೆ ತಿರಸ್ಕರಿಸಿರುವುದಾಗಿ ಹೇಳಿದರು. ಇದು ಉತ್ತರಕನ್ನಡಿಗರ ಅಸಮಾಧಾನಕ್ಕೆ ಕಾರಣವಾಗಿದೆ.
ಇದನ್ನೂ ಓದಿ: ಸುಸಜ್ಜಿತ ಆಸ್ಪತ್ರೆಗಾಗಿ ಉಪವಾಸ ಸತ್ಯಾಗ್ರಹ; ಉ.ಕನ್ನಡದಲ್ಲಿ ಹೋರಾಟ ತೀವ್ರ
ಜಿಲ್ಲೆಯಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಹೋರಾಟ ಹೆಚ್ಚಾದಾಗ ಸ್ವತಃ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರೇ ಪ್ರತಿಕ್ರಿಯಿಸಿ, ಉತ್ತರಕನ್ನಡಕ್ಕೆ ಬಂದು ಈ ಬಗ್ಗೆ ಘೋಷಣೆ ಮಾಡುವುದಾಗಿ ತಿಳಿಸಿದ್ದರು. ಆದರೆ, ಈವರೆಗೆ ಮುಖ್ಯಮಂತ್ರಿಗಳು ಜಿಲ್ಲೆಯತ್ತ ಕಾಲಿಟ್ಟಿಲ್ಲ. ಇದರ ನಡುವೆ ಕಳುಹಿಸಿದ್ದ ಪ್ರಸ್ತಾವನೆಯನ್ನು ಸಹ ತಿರಸ್ಕಾರ ಮಾಡಿರುವುದು ಜನರಿಗೆ ಬೇಸರ ತಂದಿದೆ.
ಜಿಲ್ಲೆಯಿಂದ ವಿಧಾನಸಾಭಾಧ್ಯಕ್ಷರನ್ನೂ ಸೇರಿ ನಾಲ್ವರು ಬಿಜೆಪಿ ಶಾಸಕರು, ಓರ್ವ ಕಾಂಗ್ರೆಸ್ ಶಾಸಕ, ಓರ್ವ ಬಿಜೆಪಿ ಸಚಿವರು ಅಧಿವೇಶನದಲ್ಲಿದ್ದರೂ ಉತ್ತರ ಕನ್ನಡದ ಅಗತ್ಯತೆಯಾದ, ಬಹುಬೇಡಿಕೆಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಬಗ್ಗೆ ಚಕಾರವೆತ್ತಿಲ್ಲ. ಹೀಗಿರುವಾಗ ಕಾರವಾರ ಶಾಸಕಿ ರೂಪಾಲಿ ನಾಯ್ಕ ಮಾತನಾಡಲು ಮುಂದಾದರೂ ಕೂಡ ಶಿರಸಿ ಶಾಸಕ ಕಾಗೇರಿಯವರೇ ವಿಧಾನಸಭಾಧ್ಯಕ್ಷ ಸ್ಥಾನದ ಮೂಲಕ ಅವರಿಗೆ ಸಮಸ್ಯೆಯ ಬಗ್ಗೆ ಧ್ವನಿ ಎತ್ತಲು ಬಿಟ್ಟಿಲ್ಲ ಎನ್ನುವ ಆರೋಪ ಸಹ ಕೇಳಿ ಬಂದಿದೆ.
ಇದನ್ನೂ ಓದಿ: ಉತ್ತರ ಕನ್ನಡದಲ್ಲಿ ಹೈಟೆಕ್ ಆಸ್ಪತ್ರೆ ನಿರ್ಮಾಣಕ್ಕೆ ಒತ್ತಾಯ.. ಹೋರಾಟ ಬೆಂಬಲಿಸಿದ ಚಿಂತಕ ಸೂಲಿಬೆಲೆ
ಸದ್ಯ ಜಿಲ್ಲೆಯಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಆಗುತ್ತದೆ ಎನ್ನುವ ಆಸೆಯಲ್ಲಿದ್ದ ಜನರಿಗೆ ಆರ್ಥಿಕ ಇಲಾಖೆ ಪ್ರಸ್ತಾವನೆ ತಿರಸ್ಕಾರ ಮಾಡಿರುವುದು ಬೇಸರ ತಂದಿದ್ದು, ಮುಖ್ಯಮಂತ್ರಿಗಳು ಈ ಬಗ್ಗೆ ಗಮನಹರಿಸಿ ಕೂಡಲೇ ಆಸ್ಪತ್ರೆ ನಿರ್ಮಾಣಕ್ಕೆ ಹಣ ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಬೇಕಾಗಿದೆ. ಇಲ್ಲವಾದಲ್ಲಿ ಜಿಲ್ಲೆಯಲ್ಲಿ ಮತ್ತೆ ಹೋರಾಟ ಪ್ರಾರಂಭವಾಗುವುದರಲ್ಲಿ ಅನುಮಾನವಿಲ್ಲ.