ಕಾರವಾರ: ಕರಾವಳಿಯಲ್ಲಿ ಇಂದೂ ಸಹ ರೆಡ್ ಅಲರ್ಟ್ ಮುಂದುವರಿಕೆಯಾದ ಹಿನ್ನಲೆಯಲ್ಲಿ ಉತ್ತರಕನ್ನಡ ಜಿಲ್ಲೆಯ ಕಾರವಾರ ಬಂದರಿಗೆ ರಾಜ್ಯ ಹಾಗೂ ಹೊರ ರಾಜ್ಯದ ಮೀನುಗಾರಿಕಾ ಬೋಟುಗಳು ವಾಪಸಾಗಿವೆ.
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವುದರಿಂದ ಆಳ ಸಮುದ್ರ ಮೀನುಗಾರಿಕಾ ಬೋಟುಗಳು ಮೀನುಗಾರಿಕೆ ಸ್ಥಗಿತಗೊಳಿಸಿ ಸುರಕ್ಷಿತ ಪ್ರದೇಶಗಳಲ್ಲಿ ಆಶ್ರಯ ಪಡೆದಿವೆ. ಕಾರವಾರದ ಬಂದರು ಪ್ರದೇಶದಲ್ಲಿ ಮಲ್ಪೆ, ಉಡುಪಿ ಹಾಗೂ ಹೊರರಾಜ್ಯ ಗೋವಾ, ಕೇರಳ, ತಮಿಳುನಾಡು ಭಾಗದ ಬೋಟುಗಳು ಸಹ ಲಂಗರು ಹಾಕಿ ನಿಂತಿವೆ.
ನಿನ್ನೆಯಿಂದ ಕರಾವಳಿಯಲ್ಲಿ ಮಳೆಯ ಅಬ್ಬರ ಹೆಚ್ಚಾಗಿದ್ದು ಜಿಲ್ಲೆಯ ಕಾರವಾರ, ಅಂಕೋಲಾ, ಹೊನ್ನಾವರ ಹಾಗೂ ಘಟ್ಟದ ಮೇಲಿನ ತಾಲ್ಲೂಕುಗಳಾದ ಶಿರಸಿ, ಸಿದ್ದಾಪುರ, ಯಲ್ಲಾಪುರ ತಾಲ್ಲೂಕುಗಳಲ್ಲೂ ಸಹ ಭಾರೀ ಪ್ರಮಾಣದಲ್ಲಿ ಮಳೆ ಸುರಿದಿತ್ತು. ಆದರೆ ಇಂದು ಕೊಂಚ ಬಿಡುವ ನೀಡಿದ್ದು, ಮೋಡ ಕವಿದ ವಾತಾವರಣ ಮುಂದುವರಿದಿದೆ.