ಕಾರವಾರ: ಕೊರೊನಾ ಎರಡನೇ ಅಲೆ ಅಬ್ಬರ ಆರಂಭವಾದಾಗಿನಿಂದಲೂ ಸೋಂಕು ತಗಲುವ ಭೀತಿಯಲ್ಲಿ ಆಸ್ಪತ್ರೆಗಳಿಗೆ, ಅದ್ರಲ್ಲೂ ದೂರದ ದೊಡ್ಡ ಆಸ್ಪತ್ರೆಗಳಿಗೆ ಹೋಗೋದಕ್ಕೆ ಹೆಚ್ಚಿನವರು ಭಯ ಪಡುತ್ತಿದ್ದಾರೆ. ಹೀಗಾಗಿ ಅನಾರೋಗ್ಯ ಉಂಟಾದಲ್ಲಿ ಸ್ಥಳೀಯವಾಗಿ ಲಭ್ಯವಿರುವ ಕ್ಲಿನಿಕ್ಗಳು, ಸ್ಥಳೀಯ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನೇ ಹೆಚ್ಚಿನವರು ಅವಲಂಬಿಸಿದ್ದಾರೆ.
ಆದ್ರೆ ಜಿಲ್ಲೆಯಲ್ಲಿ ನಕಲಿ ವೈದ್ಯರು ಹಾಗೂ ಕ್ಲಿನಿಕ್‌ಗಳ ಹಾವಳಿ ಹೆಚ್ಚಾಗಿದ್ದು, ಇಂತಹವರಿಗೆ ಇದೀಗ ಬಿಸಿ ಮುಟ್ಟಿಸುವ ಕಾರ್ಯಕ್ಕೆ ಆರೋಗ್ಯ ಇಲಾಖೆ ಮುಂದಾಗಿದೆ.
ಕಳೆದ ಕೆಲವು ದಿನಗಳ ಹಿಂದೆ ಅಂಕೋಲಾದಲ್ಲಿ ನಕಲಿ ವೈದ್ಯರುಗಳ ಹಾವಳಿ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ಕ್ಲಿನಿಕ್ಗಳಿಗೆ ದಾಳಿ ಮಾಡಿ ಶಾಕ್ ನೀಡಿದ್ದ ಆರೋಗ್ಯ ಇಲಾಖೆ ಇದೀಗ ದಾಂಡೇಲಿ ನಗರದಲ್ಲಿಯೂ ಅನಧಿಕೃತ ಕ್ಲಿನಿಕ್‌ಗಳ ಮೇಲೆ ತಹಶೀಲ್ದಾರ್ ಶೈಲೇಶ್ ಪರಮಾನಂದ ನೇತೃತ್ವದಲ್ಲಿ ದಾಳಿ ನಡೆಸಿದ್ದಾರೆ.
ಪಟ್ಟಣದ ಪ್ರವಾಸಿ ಮಂದಿರದ ರಸ್ತೆಯಲ್ಲಿರುವ ಡಾ. ಪರಶುರಾಮ ಸಾಂಬ್ರೇಕರ್ ಎಂಬುವವರು ನಡೆಸುತ್ತಿದ್ದ ಸಾಂಬ್ರೇಕರ್ ಕ್ಲಿನಿಕ್, ಚೌದರಿ ಗೇಟ್ ಹತ್ತಿರದಲ್ಲಿರುವ ಡಾ. ಮೊಹಮ್ಮದ್ ರಹಮಾನ ಫೀರ್ಜಾದೆ ಅವರ ರೆಹಮಾನ್ ಕ್ಲಿನಿಕ್, ಕುಳಗಿ ರಸ್ತೆಯಲ್ಲಿ ಎನ್.ಎಸ್. ಹೆಗಡೆ ಎಂಬುವರು ನಡೆಸುತ್ತಿದ್ದ ಕ್ಲಿನಿಕ್‌ಗಳ ಮೇಲೆ ದಾಳಿ ನಡೆಸಲಾಗಿದೆ. ಈ ವೇಳೆ ಯಾವುದೇ ಪದವಿ ಪಡೆಯದೆ, ಕೆಪಿಎಂ ನೋಂದಣಿ ಇಲ್ಲದೆ, ವೈದ್ಯಕೀಯ ಪ್ರಮಾಣ ಪತ್ರಗಳು ಇಲ್ಲದ ಕ್ಲಿನಿಕ್‌ಗಳ ಬಾಗಿಲು ಮುಚ್ಚಿ, ನೋಟಿಸ್ ನೀಡಲಾಗಿದೆ. ನೋಟಿಸ್ ಅವಧಿಯಲ್ಲಿ ಸಮರ್ಪಕ ದಾಖಲೆಗಳನ್ನು ತೋರಿಸದೇ ಇದ್ದಲ್ಲಿ ಅಂತಹವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ಎಚ್ಚರಿಸಿದ್ದಾರೆ.
ಇನ್ನು ಕ್ಲಿನಿಕ್ ನಡೆಸುವ ಬಹುತೇಕರು ಯಾವುದೇ ವೈದ್ಯಕೀಯ ಅರ್ಹತೆ ಪಡೆದಿಲ್ಲ ಎಂಬ ಆರೋಪ ಇದೆ. ದಾಂಡೇಲಿ ನಗರದಲ್ಲಿ ಹಲವು ವರ್ಷಗಳಿಂದ ಅನಧಿಕೃತವಾಗಿ ವೈದ್ಯಕೀಯ ಸೇವೆ ನೀಡುತ್ತಿದ್ದರೂ ಯಾರು ಕೇಳುವವರೇ ಇಲ್ಲದಂತಾಗಿತ್ತು. ಅಲ್ಲದೇ ಕೊರೊನಾ ಮಹಾಮಾರಿಯ ಆರ್ಭಟದ ನಡುವೆ ಜ್ವರ, ನೆಗಡಿ, ಕೆಮ್ಮ ಎಂದು ಬರುತ್ತಿರುವವರಿಗೆ ಕೊವಿಡ್ ಪರೀಕ್ಷೆಯ ಬಗ್ಗೆ ಸಲಹೆ ನೀಡದೇ ತಮ್ಮದೇ ಔಷಧಿ ಹಾಗೂ ಚುಚ್ಚು ಮದ್ದು ನೀಡುತ್ತಿದ್ದಾರೆಂಬ ಗಂಭೀರ ಆರೋಪವಿದೆ. ಹೀಗೆ ವ್ಯಾಪಕವಾಗಿ ದೂರು ಬಂದಿದ್ದರಿಂದ ದಾಳಿ ನಡೆಯಲಾಯಿತು ಎಂದು ತಹಶೀಲ್ದಾರ್ ಶೈಲೇಶ್ ಪರಮಾನಂದ ತಿಳಿಸಿದರು.
ಹಾಗೆಯೇ ಔಷಧಿ ಖರೀದಿ ಹಾಗೂ ಬಳಸುತ್ತಿರುವ ಔಷಧಿಗಳ ಪರಿಶೀಲನೆ ನಡೆಸಲಾಗಿದ್ದು, ಸಂಬಂಧ ಪಟ್ಟವರಿಗೆ ನೋಟಿಸ್ ನೀಡಲಾಗಿದೆ. ಈ ಬಗ್ಗೆ ಮುಗ್ಧ ಸ್ಥಳೀಯರು ಇವರನ್ನೇ ವೈದ್ಯರು ಎಂದು ನಂಬಿಕೊಂಡಿದ್ದು ಅನಿವಾರ್ಯವಾಗಿ ತೆರಳಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ಸ್ಥಳೀಯರಲ್ಲಿ ಕೇಳಿದ್ರೆ ನಾವು ಹಲವು ವರ್ಷಗಳಿಂದ ಇವರಿಂದಲೇ ಚಿಕಿತ್ಸೆ ಪಡೆದಿದ್ದೇವೆ. ಈ ಕ್ಲಿನಿಕ್ಗಳಿಂದ ನಮಗೇನು ತೊಂದರೆಯಾಗಿಲ್ಲ ಎನ್ನುತ್ತಾರೆ. ಇನ್ನೂರ್ವ ಸ್ಥಳೀಯ ನಿವಾಸಿ ಪ್ರತಾಪ್ ದುರ್ಗೇಕರ್ ಮಾತನಾಡಿ, ನಾವು ಆಸ್ಪತ್ರೆಗೆ ಬಂದಾಗ ವೈದ್ಯರು ನರ್ಸ್ ಇರಲಿಲ್ಲ. ವೈದ್ಯರಲ್ಲದವರು ರೋಗಿಯನ್ನು ನೋಡದೇ ಮಾತ್ರೆಗಳನ್ನು ಬರೆದುಕೊಟ್ಟಿದ್ದಾರೆ. ಇಂತಹ ಘಟನೆಗಳನ್ನು ಗಮನಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.
ಇದೇ ರಿತಿ ಅಂಕೋಲಾದ ಹಾರವಾಡದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಜವಾನನೇ ವೈದ್ಯನಾಗಿ ಔಷಧಿಗಳನ್ನು ನೀಡುತ್ತಿರುವುದು ಕೂಡ ಬೆಳಕಿಗೆ ಬಂದಿದೆ. ವೈದ್ಯರಿಲ್ಲದ ಕಾರಣಕ್ಕೆ ಪ್ರಬಾರಿ ವೈದ್ಯರ ಸೂಚನೆಯಂತೆ ಔಷಧಿ ನೀಡುತ್ತಿರುವುದಾಗಿ ಆತ ಹೇಳಿಕೊಂಡಿದ್ದು, ಸ್ಥಳೀಯರು ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಅಂಕೋಲಾ ತಾಲೂಕಿನ ಹಾರವಾಡದ ಈ ಆಸ್ಪತ್ರೆಯಲ್ಲಿ ಜವಾನನೇ ವೈದ್ಯ?!
ಈ ಹಿಂದೆಯೂ ಕೂಡ ದಾಂಡೇಲಿಯ ಕೆಲ ಕ್ಲಿನಿಕ್‌ಗಳ ಮೇಲೆ ದಾಳಿ ಮಾಡಲಾಗಿತ್ತು. ಆಗ ಅಧಿಕಾರಿಗಳು ಎಚ್ಚರಿಕೆ ನೀಡಿದಾಗಲೂ ಮತ್ತೆ ತಮ್ಮ ದಂಧೆಯನ್ನು ಮುಂದುವರೆಸಿದ್ದು, ಇದೀಗ ನಕಲಿ ವೈದ್ಯರಿಗೆ ಅಧಿಕಾರಿಗಳು ಚಾಟಿ ಬೀಸಿದ್ದಾರೆ.