ಭಟ್ಕಳ: ನಿಜವಾದ ಕೊರೊನಾ ವಾರಿಯರ್ಸ್ಗಳನ್ನು ಗೌರವಿಸುವಲ್ಲಿ ತಾಲೂಕಾಡಳಿತ ವಿಫಲವಾಗಿದ್ದು, ಕಾಟಾಚಾರಕ್ಕೆ ಕಾರ್ಯಕ್ರಮ ನಡೆಸಿದೆ ಎಂದು ತಂಝೀಮ್ ಸಂಸ್ಥೆ ಸದಸ್ಯರು ಹಾಗೂ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ ಘಟನೆ ಭಟ್ಕಳ ತಾಲೂಕು ಕ್ರೀಡಾಂಗಣದಲ್ಲಿ ಶನಿವಾರ ನಡೆದಿದೆ.
ಸ್ವಾತಂತ್ರ್ಯೋತ್ಸವದ ಸಮಾರಂಭದಲ್ಲಿ ಕೊರೊನಾ ವಾರಿಯರ್ಸ್ಗಳನ್ನು ಗೌರವಿಸುವ ಸಂದರ್ಭದಲ್ಲಿ ಈ ಅಸಮಾಧಾನ ತಲೆದೋರಿದೆ. ಜಿಲ್ಲೆಯಲ್ಲಿ ಮೊದಲ ಬಾರಿಗೆ ಕೊರೊನಾ ವೈರಾಣು ಭಟ್ಕಳಕ್ಕೆ ಕಾಲಿಟ್ಟಾಗ ಎಲ್ಲರಲ್ಲೂ ವಿಚಿತ್ರವಾದ ಭಯವಿತ್ತು. ರೋಗದ ಕುರಿತು ಸರಿಯಾದ ತಿಳುವಳಿಕೆ ಇಲ್ಲದ ಸಮಯದಲ್ಲೂ ಭಟ್ಕಳದ ತಂಝೀಮ್ ಸಂಸ್ಥೆ ಸ್ವಯಂ ಪ್ರೇರಿತವಾಗಿ ಮುಂದೆ ಬಂದು ತನ್ನ ಸ್ವಯಂ ಸೇವಕರ ತಂಡ ನಿರ್ಮಿಸಿ ಸೇವೆ ಸಲ್ಲಿಸಿತ್ತು. ವಿದೇಶದಿಂದ ಬಂದವರ ಮನೆಗೆ ತೆರಳಿ ಅವರಿಗೆ ಕ್ವಾರಂಟೈನ್‍ಗೆ ಹೋಗುವಂತೆ ಮನವೊಲಿಸಿದ್ದು, ಅಲ್ಲದೆ ಗಂಟಲು ದ್ರವ ಪರೀಕ್ಷೆ ಸೇರಿದಂತೆ ತಾಲೂಕಾಡಳಿತಕ್ಕೆ ವಿವಿಧ ರೀತಿಯಲ್ಲಿ ನೆರವು ನೀಡಿತ್ತು.
ಅಲ್ಲದೆ ಸರ್ಕಾರಿ ಕ್ವಾರಂಟೈನ್‍ನಲ್ಲಿ ಹೋಗಲು ಒಪ್ಪದವರಿಗೂ ಅಂಜುಮನ್ ಹಾಸ್ಟೇಲಿನಲ್ಲಿ ಉಳಿಯಲು ವ್ಯವಸ್ಥೆ ಕಲ್ಪಿಸಿತ್ತು. ನಂತರ ಕೋವಿಡ್ ಕೇರ್ ಸೆಂಟರ್ ಮಾಡುವ ಸಂದರ್ಭದಲ್ಲೂ ತಂಜೀಂ ಮುಂದೆ ಬಂದು ವುಮೆನ್ಸ್ ಸೆಂಟರ್ನಲ್ಲಿ ಅವಕಾಶ ಕಲ್ಪಸಿತ್ತು.
ಆದರೆ ಕೊರೊನಾ ಸೇನಾನಿಗಳ ಗೌರವಿಸುವ ಸಂದರ್ಭದಲ್ಲಿ ತನಗೆ ಬೇಕಾದವರ ಪಟ್ಟಿ ತಯಾರಿಸಿ ಅವರನ್ನು ಮಾತ್ರ ಗೌರವಿಸಿದೆ ಎಂದು ಆರೋಪ ಮಾಡಿದೆ. ಕನಿಷ್ಟ ಸೌಜನ್ಯಕ್ಕೂ ತಂಝೀಮ್ ಹೆಸರು ಹೇಳಲಿಲ್ಲ ಎಂದು ಸಮಾರಂಭಕ್ಕೆ ಬಂದಿದ್ದ ತಂಝೀಮ್ ಸಂಸ್ಥೆ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ತಂಝೀಮ್ ಸದಸ್ಯರು ಅಸಮಾಧಾನ ತೀವ್ರವಾಗುತ್ತಿರುವಂತೆ ಎಎಸ್‍ಪಿ ನಿಖಿಲ್ ತಂಜೀಂ ಉಪಾಧ್ಯಕ್ಷ ಇನಾಯಿತ್ ಉಲ್ಲಾ ಶಾಬಂದ್ರಿ, ಅತೀಕುರ್ ರೆಹಮಾನ್ ಮುನೀರ ಹಾಗೂ ಇತರರನ್ನು ಸಮಾಧಾನ ಪಡಿಸಲು ಯತ್ನಿಸಿದ್ದಾರೆ. ನಂತರ ಅವರ ಹೆಸರು ಹೇಳಿ ಅವರನ್ನು ಗೌರವಿಸಲು ಕರೆದಾಗ ಅದನ್ನು ತಿರಸ್ಕರಿಸಿದೆ.
ಅಲ್ಲದೆ ಲಾಕ್‍ಡೌನ್ ಸಂದರ್ಭದಲ್ಲಿ ಸತತ 3 ತಿಂಗಳುಗಳ ಕಾಲ ಮಧ್ಯಾಹ್ನ ಮತ್ತು ಸಂಜೆ ಊಟ ತಯಾರಿಸಿ ನೀಡುತ್ತಿದ್ದ ಸರ್ಪನಕಟ್ಟೆ ಸ್ಪೋಟ್ರ್ಸ್ ಕ್ಲಬ್‍ನ ಸದಸ್ಯರನ್ನು ಕಡೆಗಣಿಸಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದ್ದು, ತಾಲೂಕಾಡಳಿತ ಸ್ವಾಯುತವಾಗಿ ಕಾರ್ಯನಿರ್ವಹಿಸಿದೆ ಯಾರದ್ದೊ ಅಣತಿಯಂತೆ ಕೆಲಸ ಮಾಡಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.