ಶಿರಸಿ: ಕನ್ನಡಿಗರ ಮೊದಲ ರಾಜಧಾನಿಯಾದ ತಾಲೂಕಿನ ಬನವಾಸಿಯ ಸುಪ್ರಸಿದ್ಧ ಮಧುಕೇಶ್ವರ ದೇವಸ್ಥಾನದಲ್ಲಿರುವ ನಂದಿ ವಿಗ್ರಹ ದಿನೇ ದಿನೆ ಸವಕಳಿ ಕಾಣುತ್ತಿದೆ. ಈಗಾಗಲೇ ವಿಗ್ರಹದ ಒಂದು ಕಾಲು ಸವಕಳಿಯಾಗಿದ್ದು, ಪುರಾತನ ವಿಗ್ರಹ ತನ್ನ ಮೂಲ ಹೊಳಪನ್ನು ಕಳೆದುಕೊಳ್ಳುತ್ತಿದೆ.
ಬನವಾಸಿ ಎಂದ ತಕ್ಷಣ ಮಧುಕೇಶ್ವರ ದೇವರ ಸನ್ನಿಧಿಯಲ್ಲಿರುವ ಬೃಹತ್ ನಂದಿ ವಿಗ್ರಹ ನೆನೆಪಿಗೆ ಬರುತ್ತದೆ. ಬನವಾಸಿ ದಕ್ಷಿಣ ಭಾರತದ ಅತ್ಯಂತ ಪ್ರಾಚೀನ ಪಟ್ಟಣಗಳಲ್ಲೊಂದಾಗಿದೆ. ಪ್ರಸ್ತುತ ಬನವಾಸಿಯಲ್ಲಿ ಕಾಣ ಸಿಗುವ ಶಿಲ್ಪಗಳು, ಶಾಸನಗಳು, ಸ್ಮಾರಕಗಳೆಲ್ಲ ಸೋದೆ ಅರಸರ ಕಾಲದ್ದಾಗಿವೆ. ಅಲ್ಲಿನ ಪ್ರಮುಖ ಆಕರ್ಷಣೆಯ ನಂದಿ ವಿಗ್ರಹ, ಕ್ಷೇತ್ರಕ್ಕೆ ಬರುವ ಪ್ರವಾಸಿಗರನ್ನೆಲ್ಲ ಮೊದಲು ಆಕರ್ಷಿಸುತ್ತದೆ. ಇಂತಹ ವಿಗ್ರಹದ ಕೆಳಭಾಗ ಅದರಲ್ಲೂ ಕಾಲಿನ ಭಾಗ ಪ್ರವಾಸಿಗರ ನಿರಂತರ ಸ್ಪರ್ಶದಿಂದಾಗಿ ಸವೆಯುತ್ತಿದೆ.
ಬನವಾಸಿ ದೇವಸ್ಥಾನವು ಪುರಾತತ್ವ ಇಲಾಖೆಗೆ ಒಳಪಡುತ್ತದೆ. ಅದರ ಮುಖ್ಯ ಕಚೇರಿ ಧಾರವಾಡದಲ್ಲಿದ್ದು, ಅಧಿಕಾರಿಗಳು ಆಗೋಮ್ಮೆ ಈಗೋಮ್ಮೆ ಎನ್ನುವಂತೆ ಬರುತ್ತಾರೆ. ಆದ ಕಾರಣ ವಿಗ್ರಹ ನಿರ್ಲಕ್ಷ್ಯದಿಂದ ಸವತಕ್ಕೆ ಒಳಗಾಗುತ್ತಿದ್ದು, ಸಾವಿರಾರು ವರ್ಷದ ಇತಿಹಾಸ ಉಳ್ಳ ವಿಗ್ರಹ ತನ್ನ ರೂಪವನ್ನು ಕಳೆದುಕೊಳ್ಳುತ್ತಿದೆ. ಇದರಿಂದ ಇನ್ನೂ ಹೆಚ್ಚಿನ ಸವಕಳಿ ಆಗದಂತೆ ತಡೆದು, ವಿಗ್ರಹಕ್ಕೆ ಹೆಚ್ಚಿನ ಮಾನ್ಯತೆ ನೀಡಿ ವಿಗ್ರಹವನ್ನು ಸಂರಕ್ಷಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಬನವಾಸಿಯ ಬೃಹತ್ ನಂದಿವಿಗ್ರಹ ಒಂದು ಸಾವಿರಕ್ಕೂ ಅಧಿಕ ವರ್ಷ ಹಳೆಯ ವಿಗ್ರಹವಾಗಿದೆ. ಚಾಲುಕ್ಯರ ಕಾಲದ ನಿರ್ಮಾಣದ ಈ ವಿಗ್ರಹದ ರಕ್ಷಣೆ ಅಗತ್ಯವಾಗಿದ್ದು, ಅದಕ್ಕೆ ಸವೆತ ಕಂಡ ಭಾಗಕ್ಕೆ ತಾಮ್ರದ ಹೊದಿಕೆ ಅಥವಾ ರಕ್ಷಣಾತ್ಮಕವಾಗಿ ಏನಾದರು ಕ್ರಮಕೈಗೊಂಡರೆ ಇನ್ನೂ ಹೆಚ್ಚಿನ ಸವೆತವನ್ನು ತಡೆಗಟ್ಟಬಹುದಾಗಿದೆ ಎಂಬುದು ಇತಿಹಾಸ ಸಂಶೋಧಕರ ಅಭಿಪ್ರಾಯವಾಗಿದೆ.