ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗುತ್ತಿರುವ ಹಿನ್ನೆಲೆ ಕದ್ರಾ ಹಾಗೂ ಕೊಡಸಳ್ಳಿ ಜಲಾಶಯಗಳು ಭರ್ತಿಯಾಗುವ ಹಂತಕ್ಕೆ ತಲುಪಿವೆ. ಇದರಿಂದಾಗಿ ಒಟ್ಟು 42,175 ಕ್ಯೂಸೆಕ್ ನೀರನ್ನು ಕಾಳಿ ನದಿಗೆ ಹರಿ ಬಿಡಲಾಗಿದೆ.
ಜಿಲ್ಲೆಯಾದ್ಯಂತ ಕಳೆದ ಕೆಲ ದಿನಗಳಿಂದ ನಿರಂತರವಾಗಿ ಮಳೆಯಾಗುತ್ತಿದೆ. ಅದರಲ್ಲಿಯೂ ಘಟ್ಟದ ಮೇಲ್ಭಾಗದ ತಾಲೂಕುಗಳಲ್ಲಿ ಮಳೆ ವ್ಯಾಪಕವಾಗಿ ಸುರಿಯತೊಡಗಿದೆ. ಪರಿಣಾಮ ಕಾಳಿ ನದಿಗೆ ಯಥೇಚ್ಛವಾಗಿ ನೀರು ಹರಿದುಬರುತ್ತಿದೆ. ಕದ್ರಾ ಜಲಾಶಯಕ್ಕೆ 50,219 ಕ್ಯೂಸೆಕ್ ನೀರಿನ ಒಳಹರಿವು ಕಂಡುಬಂದಿದೆ.
ಅಲ್ಲದೇ, 34.50 ಮೀಟರ್ ಗರಿಷ್ಠ ಸಾಮರ್ಥ್ಯ ಹೊಂದಿರುವ ಕದ್ರಾ ಜಲಾಶಯದ ಮಟ್ಟ ಇಂದು ಮಧ್ಯಾಹ್ನದ ಹೊತ್ತಿಗೆ 30.67 ಮೀಟರ್ ತಲುಪಿದೆ. ಈ ಹಿನ್ನೆಲೆಯಲ್ಲಿ ಜಲಾಶಯದ ಸುರಕ್ಷತೆ ಹಾಗೂ ಪ್ರವಾಹದ ಮುಂಜಾಗೃತಾ ಕ್ರಮವಾಗಿ ಜಲಾಶಯದಿಂದ ಒಟ್ಟು ಎರಡು ಬಾರಿ 8 ಗೇಟ್‌ಗಳ ಮೂಲಕ ಒಟ್ಟು 42,175 ಕ್ಯೂಸೆಕ್ ನೀರನ್ನು ಕಾಳಿ ನದಿಗೆ ಬಿಡಲಾಗಿದೆ.
ಕದ್ರಾ ಜಲಾಶಯಕ್ಕೂ ಮೊದಲಿನ ಕೊಡಸಳ್ಳಿ ಜಲಾಶಯ ಕೂಡ ಭರ್ತಿಯಾಗುವ ಹಂತಕ್ಕೆ ತಲುಪಿದ್ದು, 28,082 ಕ್ಯೂಸೆಕ್ ಒಳ ಹರಿವು ಕಂಡುಬಂದಿದೆ. ಈ ಕಾರಣದಿಂದ ಜಲಾಶಯ ತುಂಬುವ ಸಾಧ್ಯತೆ ಇರುವ ಕಾರಣ ಇಲ್ಲಿ ಕೂಡ ಎರಡು ಬಾರಿ ಒಟ್ಟು 4 ಗೇಟ್‌ಗಳ ಮೂಲಕ 22,393 ಕ್ಯೂಸೆಕ್ ನೀರನ್ನು ಹೊರಗೆ ಬಿಡಲಾಗಿದೆ. ಜಲಾಶಯವು ಗರಿಷ್ಠ 75.50 ಮೀಟರ್ ಪೈಕಿ 70.84 ಮೀಟರ್ ಭರ್ತಿಯಾದ ಹಿನ್ನೆಲೆ ಜಲಾಶಯದಿಂದ ಕದ್ರಾ ಜಲಾಶಯಕ್ಕೆ ನೀರನ್ನು ಹೊರಬಿಡಲಾಗಿದೆ. ಪರಿಣಾಮ ಈಗಾಗಲೇ ಕಾಳಿ ನದಿಯಂಚಿನ ಪ್ರದೇಶಗಳಿಗೆ ನೀರು ಬರಲಾರಂಭಿಸಿದ್ದು, ಆತಂಕ ಸೃಷ್ಟಿಯಾಗಿದೆ.
ಓದಿ: ರಾಜೀನಾಮೆ ಕುರಿತು ಸಿಎಂ ಸುಳಿವು: ಸಚಿವ ಸ್ಥಾನದ ಚಿಂತೆ, ಬಿಎಸ್ವೈ ನಿವಾಸಕ್ಕೆ ಸಚಿವರ ದೌಡು..!