ಶಿರಸಿ: ರಾಜ್ಯದಲ್ಲಿ ಮುಂದಿನ ಒಂದೆರಡು ದಿನಗಳಲ್ಲಿ ಹೈಕಮಾಂಡ್ ಮುಖ್ಯಮಂತ್ರಿ ಆಯ್ಕೆ ಮಾಡಲಿದೆ. ನಂತರ ಸಚಿವರ ಆಯ್ಕೆ ನಡೆಯಲಿದ್ದು, ಹುದ್ದೆ ಬೇಡ ಎನ್ನಲು ನಾನೇನು ಸನ್ಯಾಸಿಯಲ್ಲ ಎಂದು ಮಾಜಿ ಸಚಿವ ಶಿವರಾಮ ಹೆಬ್ಬಾರ ಹೇಳಿದ್ದಾರೆ.
ಶಿರಸಿಯಲ್ಲಿ ಮಾತನಾಡಿದ ಅವರು, ಸಚಿವರ ಆಯ್ಕೆ ಪಕ್ಷದ ಹೈಕಮಾಂಡ್ ಹಾಗೂ ನೂತನ ಮುಖ್ಯಮಂತ್ರಿ ವಿವೇಚನೆಗೆ ಬಿಟ್ಟಿದ್ದು. ಬಾಂಬೆ ಟೀಮ್ ಎಂಬುದು ಈಗ ಮುಗಿದ ಅಧ್ಯಾಯ. ನಾವೆಲ್ಲ ಬಿಜೆಪಿ ಶಾಸಕರು. ಯಾರಿಗೆ ಸಚಿವ ಸ್ಥಾನ ನೀಡಬೇಕು ಎಂಬುದನ್ನು ಹಿರಿಯರೇ ತೀರ್ಮಾನಿಸುತ್ತಾರೆ ಎಂದು ತಿಳಿಸಿದರು.
ಪಕ್ಷದ ಶಿಸ್ತು, ಸಿದ್ಧಾಂತಕ್ಕೆ ತಲೆ ಬಾಗಿ ಯಡಿಯೂರಪ್ಪ ರಾಜೀನಾಮೆ ನೀಡಿದ್ದಾರೆ. ಬೇಸರವಿಲ್ಲ ಎಂದು ಅವರೇ ಸ್ಪಷ್ಟಪಡಿಸಿದ್ದಾರೆ. ಕಾಲಕಾಲಕ್ಕೆ ತಕ್ಕಂತೆ ಪಕ್ಷದ ವರಿಷ್ಠರು ತೆಗೆದುಕೊಳ್ಳುವ ನಿರ್ಧಾರಕ್ಕೆ ಎಲ್ಲರೂ ತಲೆಬಾಗುತ್ತೇವೆ. ಯಡಿಯೂರಪ್ಪ ನಾಯಕತ್ವದಲ್ಲಿ 17 ತಿಂಗಳು ಕಾರ್ಮಿಕ ಖಾತೆ ನಿಭಾಯಿಸಿದ ನೆಮ್ಮದಿಯಿದೆ ಎಂದು ಹೆಬ್ಬಾರ ಹೇಳಿದ್ರು.