ಕಾರವಾರ : ಇಷ್ಟು ದಿನ ನಗರ ಪ್ರದೇಶಗಳೇ ಕೋವಿಡ್ ಹಾಟ್ ಸ್ಪಾಟ್ಗಳಾಗಿದ್ದವು. ಆದರೆ, ಇದೀಗ ಹಳ್ಳಿಗಳಿಗೂ ಕೊರೊನಾ ಕಾಲಿಟ್ಟಿದೆ.
ರಾಜ್ಯದಲ್ಲಿಯೇ ಅತಿ ಹೆಚ್ಚು ಕೊರೊನಾ ಪಾಸಿಬಿಲಿಟಿ ಹೊಂದಿರುವ ಉತ್ತರಕನ್ನಡ ಜಿಲ್ಲೆಯ ಹಳ್ಳಿಯೊಂದರಲ್ಲಿ ಈಟಿವಿ ಭಾರತ ನಡೆಸಿದ ರಿಯಾಲಿಟಿ ಚೆಕ್ ಇಲ್ಲಿದೆ ನೋಡಿ.
ಉ.ಕ. ಜಿಲ್ಲೆಯಲ್ಲಿ ಕೊರೊನಾಗೆ ಕಡಿವಾಣ ಹಾಕಲು 19 ಗ್ರಾಮ ಪಂಚಾಯತ್‌ಗಳನ್ನು ಕಂಟೇನ್ಮೆಂಟ್ ಝೋನ್ಗಳಾಗಿ ಮಾಡಲಾಗಿದೆ.
ಅತೀ ಹೆಚ್ಚು ಸೋಂಕಿನ ಪ್ರಮಾಣ ದಾಖಲಾದ ತಾಲೂಕಿನ ಚಿತ್ತಾಕುಲ ಗ್ರಾಮವನ್ನು ಕಂಟೇನ್ಮೆಂಟ್ ಝೋನ್ ಎಂದು ಘೋಷಿಸಲಾಗಿದೆ.
ಗ್ರಾಮದಲ್ಲಿ 200ಕ್ಕೂ ಅಧಿಕ ಕೋವಿಡ್ ಪ್ರಕರಣಗಳು ದಾಖಲಾಗಿವೆ. ಇದರಿಂದ ಅನಗತ್ಯವಾಗಿ ತಿರುಗಾಡುವ ವಾಹನಗಳನ್ನು ತಡೆದು ಪೊಲೀಸರು ತಪಾಸಣೆ ಮಾಡುತ್ತಿದ್ದಾರೆ.
ಜನರು ಮನೆಯಿಂದ ಹೊರ ಬರದಂತೆ ಹಾಗೂ ಮನೆ ಮನೆಗಳ ಬಳಿ ತರಕಾರಿ, ಹಣ್ಣು, ದಿನಸಿ ವಿತರಣೆ ಮಾಡಲು ವ್ಯವಸ್ಥೆ ಮಾಡಲಾಗಿದೆ. ಆದರೂ ಮೆಡಿಕಲ್ ಇನ್ನಿತರ ಕಾರಣ ಹೇಳಿ ಜನರು ಓಡಾಡುತ್ತಿದ್ದಾರೆ. ಜನರ ಓಡಾಟಕ್ಕೆ ಬ್ರೇಕ್ ಹಾಕುವುದೇ ಪೊಲೀಸರಿಗೆ ದೊಡ್ಡ ತಲೆ ನೋವಾಗಿದೆ.
ಸದ್ಯ ಗ್ರಾಮದಲ್ಲಿ 120ಕ್ಕೂ ಅಧಿಕ ಸಕ್ರಿಯ ಪ್ರಕರಣಗಳಿವೆ. ಹಲವರು ಸೋಂಕಿನಿಂದ ಮೃತಪಟ್ಟಿದ್ದಾರೆ. ಗಡ್ಡಕ್ಕೆ ಬೆಂಕಿ ಬಿದ್ದ ಮೇಲೆ ಬಾವಿ ತೋಡಿದ ಹಾಗೇ ಅಂತಿಮವಾಗಿ ಜಿಲ್ಲಾಡಳಿತ ಗ್ರಾಮವನ್ನು ಕಂಟೇನ್ಮೆಂಟ್ ಝೋನ್ ಎಂದು ಘೋಷಣೆ ಮಾಡಿದೆ.
ಆದರೂ ಜನರ ಓಡಾಡಕ್ಕೆ ಮಾತ್ರ ಸಂಪೂರ್ಣವಾಗಿ ಬ್ರೇಕ್ ಹಾಕಿಲ್ಲ. ಕೆಲ ಭಾಗಗಳಲ್ಲಿ ರೋಗ ಲಕ್ಷಣಗಳಿದ್ದರೂ ಮುಚ್ಚಿಟ್ಟು ಎಲ್ಲೆಂದರಲ್ಲಿ ಓಡಾಡುತ್ತಿದ್ದಾರೆ. ಕೊರೊನಾ ಕಡಿವಾಣಕ್ಕೆ ಸ್ಥಳೀಯ ಪಂಚಾಯತ್ ಸಹ ಕಾರ್ಯನಿರ್ವಹಿಸುತ್ತಿದೆ.
ಜನರ ಮನೆ ಬಾಗಿಲಿಗೆ ವಸ್ತುಗಳನ್ನು ಪೂರೈಸುವ, ಅನಾರೋಗ್ಯ ಪೀಡಿತರಿಗೆ ಔಷಧಿ ವಿತರಣೆ, ಸೋಂಕಿತರ ಆಸ್ಪತ್ರೆ ಸಾಗಾಟಕ್ಕೆ ಐದು ವಾಹನಗಳನ್ನು ಮೀಸಲಿಡಲಾಗಿದೆ.
ಜಿಲ್ಲೆಯಲ್ಲಿ ಇದೇ ರೀತಿ 19 ಹಳ್ಳಿಗಳನ್ನು ಕಂಟೇನ್ಮೆಟ್ ಝೋನ್ ಎಂದು ಘೋಷಣೆ ಮಾಡಲಾಗಿದೆ. ಶೇ.40ರಷ್ಟು ಕೋವಿಡ್ ಪ್ರಕರಣಗಳು ಕಂಡು ಬಂದ ಯಾವುದೇ ಪಂಚಾಯತ್‌ನ ಕಂಟೇನ್ಮೆಂಟ್ ಝೋನ್ ಮಾಡಲಾಗುತ್ತಿದೆ.