ಕಾರವಾರ: ಸ್ಥಳೀಯರ ವಿರೋಧದಿಂದಾಗಿ ತಾಯಿಯ ಅಂತ್ಯಸಂಸ್ಕಾರ ನಡೆಸಲು ಸಾಧ್ಯವಾಗದೆ ಪರದಾಡುತ್ತಿದ್ದ ಯೋಧ ಕೊನೆಗೂ ಪೊಲೀಸರು ಹಾಗೂ ಅಧಿಕಾರಿಗಳ ನೆರವಿನಿಂದ ನಗರದಲ್ಲಿ ಅಂತ್ಯ ಸಂಸ್ಕಾರವನ್ನು ನೆರವೇರಿಸಿದ್ದಾರೆ.
ಜಾರ್ಖಂಡ್ ಮೂಲದ ಯೋಧ ಸುಮಿತ್ ಕುಮಾರ್ ಸೆಹೆಗಲ್ ಎಂಬಾತನ ತಾಯಿ ಅನಿತಾ ದೇವಿ (48) ಕಿಡ್ನಿ ವೈಫಲ್ಯದಿಂದಾಗಿ ಮಂಗಳವಾರ ಮೃತಪಟ್ಟಿದ್ದರು. ಆದರೆ ಕೊರೊನಾದಿಂದಾಗಿ ಸ್ವಂತ ಊರಿಗೆ ಮೃತದೇಹ ಕೊಂಡೊಯ್ಯಲು ಸಾಧ್ಯವಾಗದೇ ಕಾರವಾರ ಚೆಂಡಿಯಾ ಬಳಿ ಅಂತ್ಯ ಸಂಸ್ಕಾರ ನಡೆಸಲು ಮುಂದಾಗಿದ್ದರು. ಈ ಬಗ್ಗೆ ಸ್ಥಳೀಯ ಗ್ರಾಮ ಪಂಚಾಯಿತಿಯಿಂದ ಪರವಾನಿಗೆ ಕೂಡ ಪಡೆದಿದ್ದರು. ಆದರೆ ಸ್ಥಳೀಯರು ಕೊರೊನಾ ಆತಂಕದಿಂದಾಗಿ ತಮ್ಮೂರಿನ ಸ್ಮಶಾನದಲ್ಲಿ ಅಂತ್ಯ ಕ್ರಿಯೆ ನಡೆಸಲು ವಿರೋಧ ವ್ಯಕ್ತಪಡಿದ್ದರು.
ಹೆಚ್ಚಿನ ವಿವರಕ್ಕೆ ಈ ಲಿಂಕ್ ಕ್ಲಿಕ್ ಮಾಡಿ ಸ್ಥಳೀಯರ ವಿರೋಧ: ಕಾರವಾರದಲ್ಲಿ ತಾಯಿಯ ಅಂತ್ಯ ಸಂಸ್ಕಾರಕ್ಕೆ ಯೋಧನ ಪರದಾಟ!
ಈ ಬಗ್ಗೆ "ಈಟಿವಿ ಭಾರತ"ನಲ್ಲಿ ''ಸ್ಥಳೀಯರ ವಿರೋಧ: ತಾಯಿಯ ಅಂತ್ಯಸಂಸ್ಕಾರಕ್ಕೆ ಪರದಾಡುತ್ತಿರುವ ಯೋಧ" ಎಂಬ ಶೀರ್ಷಿಕೆಯಡಿ ವರದಿ ಬಿತ್ತರಿಸಲಾಗಿತ್ತು. ವರದಿ ಬೆನ್ನಲ್ಲೇ ಎಚ್ಚೆತ್ತುಕೊಂಡು ಸ್ಥಳೀಯ ಆಡಳಿತ ಹಾಗೂ ಪೊಲೀಸರು ಕಾರವಾರದ ಸರ್ವೋದಯ ನಗರದ ಬಳಿಯ ಸ್ಮಶಾನದಲ್ಲಿ ಸ್ಥಳೀಯರ ಸಹಕಾರ ಪಡೆದು ಅವಕಾಶ ಕಲ್ಪಿಸಿದ್ದರು. ಅದರಂತೆ ಯೋಧ ತನ್ನ ತಾಯಿಯ ಅಂತ್ಯ ಸಂಸ್ಕಾರವನ್ನು ನಡೆಸಿದ್ದಾರೆ.