ಶಿರಸಿ (ಉತ್ತರ ಕನ್ನಡ): ಹರಿದು ಬಿದ್ದಿದ್ದ ಸರ್ವಿಸ್ ಲೈನ್ ವಿದ್ಯುತ್ ತಂತಿ ತಗುಲಿ ರೈತ ಮತ್ತು ಜಾನುವಾರು ಸಾವನ್ನಪ್ಪಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನ ಸನವಳ್ಳಿ ಗ್ರಾಮದಲ್ಲಿ ಶನಿವಾರ ನಡೆದಿದೆ. ಗದ್ದೆಯ ಕೆಲಸದಲ್ಲಿ ನಿರತರಾಗಿದ್ದ ವೇಳೆ ಈ ಅವಘಡ ನಡೆದಿದೆ.
ಈರಪ್ಪ ಯಲ್ಲಪ್ಪ ಕೆರೆಹೊಲದವರ (68) ಮೃತ ರೈತ. ಸನವಳ್ಳಿಯ ಸರ್ವೇ ನಂ.38 ಹೊಲದಲ್ಲಿ ವಿದ್ಯುತ್ ಕಂಬದಿಂದ ಹೊಲದ ಬೋರಿಗೆ ಹಾಕಿರುವ ಸರ್ವಿಸ್ ಲೈನ್ ಹರಿದು ಬಿದ್ದಿತ್ತು. ರೈತ ಮತ್ತು ಎತ್ತು ಅಲ್ಲೇ ಓಡಾಡುತ್ತಿದ್ದಾಗ ಮೊದಲಿಗೆ ಎತ್ತು ವಿದ್ಯುತ್ ಲೈನ್ ತುಳಿದು ಶಾಕ್ನಿಂದ ಮೃತಪಟ್ಟಿದೆ. ಆ ವೇಳೆ ಬರಿಗೈನಲ್ಲಿ ಜಾನುವಾರುವನ್ನು ಎತ್ತಲು ಹೋದ ರೈತ ಈರಪ್ಪ ಅವರಿಗೂ ವಿದ್ಯುತ್ ಶಾಕ್ ಹೊಡೆದು ಅಸ್ವಸ್ಥರಾಗಿದ್ದರು. ಕೂಡಲೇ ಅವರನ್ನು ಕುಟುಂಬದವರು ಮುಂಡಗೋಡ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬರುವಾಗ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಮುಂಡಗೋಡ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ವಿದ್ಯುತ್ ಶಾರ್ಟ್ ಸರ್ಕ್ಯೂಟ್- ಯುವಕ ಸಾವು: ನಿರ್ಮಾಣ ಹಂತದಲ್ಲಿದ್ದ ಮನೆಯ ಗೋಡೆಗಳಿಗೆ ಕ್ಯೂರಿಂಗ್ ಮಾಡಲು ಹೋಗಿದ್ದ ಯುವಕನೊಬ್ಬ ಆಕಸ್ಮಿಕ ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದ ಸಾವನ್ನಪ್ಪಿದ ಘಟನೆ ಗಂಗಾವತಿ ನಗರದ 23ನೇ ವಾರ್ಡ್ನ ಚಲುವಾದಿ ಓಣಿಯಲ್ಲಿ ನಡೆದಿದೆ. ಕೂಲಿಕಾರ್ಮಿಕ ದಂಪತಿ ಹನುಮಂತಪ್ಪ-ಹುಲಿಗೆಮ್ಮ ಅವರ ಪುತ್ರ ಕುಮಾರ ಭಜಂತ್ರಿ (21) ಮೃತ ಯುವಕ. ಈತ ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿ ದ್ವಿತೀಯ ಪಿಯುಸಿಯಲ್ಲಿ ವ್ಯಾಸಂಗ ಮಾಡುತ್ತಿದ್ದ.
ನಿರ್ಮಾಣ ಹಂತದಲ್ಲಿದ್ದ ತಮ್ಮದೇ ಮನೆಗೆ ಕ್ಯೂರಿಂಗ್ ಮಾಡಲು ತೆರಳಿದ್ದ ಕುಮಾರ, ನೀರಿನ ಮೋಟರ್ ಆನ್ ಮಾಡಲು ಸ್ವಿಚ್ ಹಾಕಲು ಮುಂದಾದಾಗ ವಿದ್ಯುತ್ ಪ್ರವಾಹಿಸಿ ತೀವ್ರ ಗಾಯಗೊಂಡಿದ್ದ. ತಕ್ಷಣ ಯುವಕನನ್ನು ಇಲ್ಲಿನ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆ ದಾಖಲಿಸುವ ಸಂದರ್ಭದಲ್ಲಿ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ. ಮೃತ ಯುವಕನ ಮರಣೋತ್ತರ ಪರೀಕ್ಷೆ ನಡೆದಿದ್ದು, ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪ್ರತ್ಯಕ್ಷದರ್ಶಿ ಬಿಚ್ಚುಗತ್ತಿ ಅಲ್ತಾಫ್ ತಿಳಿಸಿದ್ದಾರೆ.
ಇದನ್ನೂ ಓದಿ: ವಿದ್ಯುತ್ ಶಾರ್ಟ್ ಸರ್ಕ್ಯೂಟ್: ಯಾದಗಿರಿಯಲ್ಲಿ ದಂಪತಿ ಸಜೀವ ದಹನ
ಕಾಡಾನೆ ದಾಳಿಗೆ ಹಸು ಬಲಿ: ಕಾಡಾನೆ ದಾಳಿಯಿಂದ ಮನೆಯ ಸಮೀಪ ಕಟ್ಟಿದ್ದ ಹಸುವೊಂದು ಬಲಿಯಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಮಾವಿನಕುಡಿಗೆ ಗ್ರಾಮದಲ್ಲಿ ನಡೆದಿದೆ. ಬಾಳೂರು ಹೋಬಳಿ ಕೂವೆ ಸಮೀಪದ ಮಾವಿನ ಕೂಡಿಗೆ ಗ್ರಾಮದ ಬೋಬೇಗೌಡ ಎಂಬವರ ಮನೆ ಸಮೀಪ ಕಾಡಾನೆ ದಾಂದಲೆ ನಡೆಸಿದೆ. ಅಡಿಕೆ, ತೆಂಗಿನ ಮರ, ಬಾಳೆ ಸೇರಿದಂತೆ ತೋಟದ ಬೆಳೆಗಳನ್ನು ನಾಶಪಡಿಸಿದೆ.
ಮನೆಗೆ ಹೊಂದಿಕೊಂಡಂತೆ ಕಟ್ಟಿ ಹಾಕಿದ್ದ ಹಸುವಿನ ಮೇಲೆ ಕಾಡಾನೆ ದಾಳಿ ಮಾಡಿದೆ. ತಪ್ಪಿಸಿಕೊಳ್ಳಲು ಆಗದೇ ಹಸು ಸ್ಥಳದಲ್ಲೇ ಸಾವನ್ನಪ್ಪಿದೆ. ತೋಟದಲ್ಲಿ ಅಡಿಕೆ ಮತ್ತು ಫಸಲು ಬರುತ್ತಿದ್ದ 4 ದೊಡ್ಡ ತೆಂಗಿನ ಮರಗಳನ್ನು ಕಾಡಾನೆ ಬುಡ ಸಮೇತ ಕಿತ್ತು ಹಾಕಿದೆ. ಈ ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ಪಶುವೈದ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮೂಡಿಗೆರೆ ತಾಲೂಕಿನ ಅನೇಕ ಕಡೆ ಕಾಡಾನೆ ಹಾವಳಿ ಮಿತಿ ಮೀರಿದೆ. ಕಾಡಾನೆಗಳ ಉಪಟಳದಿಂದ ಬೆಳೆಗಳ ನಷ್ಟದ ಜತೆಗೆ ಜನರು ಜೀವ ಭಯದಲ್ಲಿ ಬದುಕು ನಡೆಸುವಂತಾಗಿದೆ. ಕಾಡಾನೆ ಹಾವಳಿಗೆ ಶಾಶ್ವತ ಪರಿಹಾರ ಒದಗಿಸಬೇಕು ಎಂದು ಒತ್ತಾಯಿಸುತ್ತಲೇ ಬರುತ್ತಿದ್ದು, ಯಾವುದೇ ಪ್ರಯೋಜನ ಆಗುತ್ತಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.
ಇದನ್ನೂ ಓದಿ: ಚಿಕ್ಕಮಗಳೂರು: ಮನೆಯಂಗಳಕ್ಕೆ ಬಂದು ಕಾರು ಜಖಂಗೊಳಿಸಿದ ಕಾಡಾನೆ- ವಿಡಿಯೋ