ಶಿರಸಿ: ಯಲ್ಲಾಪುರ ಉಪ ಚುನಾವಣೆಯ ಮತ ಎಣಿಕೆಯು ಶಿರಸಿಯ ಎಂಇಎಸ್ ವಾಣಿಜ್ಯ ಕಾಲೇಜಿನಲ್ಲಿ ನಡೆಯಲಿದ್ದು, ಮತ ಎಣಿಕೆ ಕೇಂದ್ರಕ್ಕೆ ಅಗತ್ಯ ಭದ್ರತೆ ಒದಗಿಸಲಾಗಿದೆ. ಈ ಹಿನ್ನಲೆಯಲ್ಲಿ ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಡಾ.ಹರೀಶ್ ಕುಮಾರ್ ಕೆ ಇಂದು ಮತ ಎಣಿಕೆ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಯಲ್ಲಾಪುರ ವಿಧಾನಸಭಾ ಕ್ಷೇತ್ರದ 231 ಮತಗಟ್ಟೆಗಳ ಮತಯಂತ್ರಗಳನ್ನು ಶಿರಸಿಯ ಎಂಇಎಸ್ ವಾಣಿಜ್ಯ ಕಾಲೇಜಿನ ಭದ್ರತಾ ಕೊಠಡಿಯಲ್ಲಿ ಇರಿಸಲಾಗಿದ್ದು, ಈ ಕೊಠಡಿ ಸುತ್ತ ಭಾರಿ ಪೊಲೀಸ್ ಬಂದೊಬಸ್ತ್ ಮಾಡಲಾಗಿದೆ. ಮತ ಎಣಿಕೆ ನಡೆಯುವ ದಿನ ಕೇಂದ್ರದ 200ಮೀಟರ್ ಸುತ್ತ ನಿಷೇಧಾಜ್ಞೆ ಹೊರಡಿಸಲಾಗಿದ್ದು ಹಾಗೂ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ದಿನಾಂಕ 08-12-2019ರ ಮಧ್ಯರಾತ್ರಿ 12ಗಂಟೆಯಿಂದ 09-12-2019ರ ಮಧ್ಯರಾತ್ರಿವರೆಗೆ ಮದ್ಯ ಮಾರಾಟ ಮತ್ತು ಸರಬರಾಜು ನಿಷೇಧಿಸಿ ಜಿಲ್ಲಾಧಿಕಾರಿ ಡಾ.ಹರೀಶ್ ಕುಮಾರ್ ಆದೇಶ ಹೊರಡಿಸಿದ್ದಾರೆ.
ಉಪ ಚುನಾವಣೆಯಲ್ಲಿ ಒಟ್ಟು ಶೇಕಡಾ 77.52 ರಷ್ಟು ಮತದಾನವಾಗಿದ್ದು, ಚುನಾವಣಾ ಕಣದಲ್ಲಿದ್ದ ಬಿಜೆಪಿಯ ಶಿವರಾಮ ಹೆಬ್ಬಾರ, ಕಾಂಗ್ರೆಸ್ ಪಕ್ಷದ ಭೀಮಣ್ಣ ನಾಯ್ಕ, ಜೆಡಿಎಸ್ ನ ಚೈತ್ರಾ ಸೇರಿದಂತೆ ಏಳು ಅಭ್ಯರ್ಥಿಗಳ ಭವಿಷ್ಯ ಡಿಸೆಂಬರ್ 9ರಂದು ಹೊರಬೀಳಲಿದೆ.