ಭಟ್ಕಳ: ಕೋವಿಡ್-19 ಜಗತ್ತಿನಾದ್ಯಂತ ಸಂಕಷ್ಟವನ್ನು ಸೃಷ್ಟಿಸಿದ್ದು, ಎಲ್ಲ ರೀತಿಯ ಧಾರ್ಮಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಚಟುವಟಿಕೆಗಳಿಗೆ ಕಡಿವಾಣ ಹಾಕಿದೆ. ಈ ಹಿನ್ನೆಲೆ ಭಟ್ಕಳ ತಾಲೂಕು ಸೇರಿದಂತೆ ಕರಾವಳಿ ಜಿಲ್ಲೆಗಳಲ್ಲಿ ಈದ್ ಉಲ್ ಫಿತರ್ ಹಬ್ಬವನ್ನು ಅತ್ಯಂತ ಸರಳವಾಗಿ ಆಚರಿಸಲಾಯಿತು.
ಪ್ರತಿ ವರ್ಷ ಭಟ್ಕಳದ ಬಂದರ್ ರಸ್ತೆಯಲ್ಲಿರುವ ಈದ್ಗಾ ಮೈದಾನದಲ್ಲಿ ಸಾವಿರಾರು ಮುಸ್ಲಿಮರು ಸೇರಿ ಸಾಮೂಹಿಕ ನಮಾಜ್ ಮಾಡುತ್ತಿದ್ದರು. ಈದ್ಗಾ ಮತ್ತು ಮಸೀದಿಗಳಲ್ಲಿ ನಿರ್ವಹಿಸಲ್ಪಡುವ ಈದ್ ವಿಶೇಷ ಪ್ರಾರ್ಥನೆಗೆ ಈ ಬಾರಿ ಅವಕಾಶವಿಲ್ಲದ ಕಾರಣ ಭಟ್ಕಳದ ಮುಸ್ಲಿಮರು ತಮ್ಮ ತಮ್ಮ ಮನೆಗಳಲ್ಲೇ ಈದ್ ಪ್ರಾರ್ಥನೆ ಸಲ್ಲಿಸಿದ್ದಾರೆ.
ಪ್ರತಿ ಮನೆಯಲ್ಲೂ ತಮ್ಮ ಕುಟುಂಬದ ಸದಸ್ಯರೊಡನೆ ನಮಾಜ್ ಆಚರಿಸುವುದರ ಮೂಲಕ ಕೊರೊನಾ ಸಂಕಷ್ಟದಿಂದ ಜಗತ್ತನ್ನು ಪಾರು ಮಾಡುವಂತೆ ಸೃಷ್ಟಿಕರ್ತನಲ್ಲಿ ಮೊರೆಯಿಟ್ಟರು.