ಕಾರವಾರ(ಉತ್ತರ ಕನ್ನಡ): ಸ್ವಚ್ಛ ಗ್ರಾಮದ ಯೋಜನೆಯಡಿ ಮನೆ ಕಸ ವಿಲೇವಾರಿಗೆಂದು ಆಯ್ದ ಮನೆ, ಹೊಟೇಲ್, ಅಂಗಡಿಗಳಿಗೆ ಹಂಚಲು ಖರೀದಿಸಿದ ಕಸದಬುಟ್ಟಿ ವ್ಯವಹಾರದಲ್ಲಿ ಗ್ರಾಮ ಪಂಚಾಯಿತಿಯವರು ದೊಡ್ಡ ಅವ್ಯವಹಾರ ನಡೆಸಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಶಿರಾಲಿ ಗ್ರಾಮ ಪಂಚಾಯತಿಯಲ್ಲಿ ಎರಡು ಪ್ರತ್ಯೇಕ ಬಿಲ್ ಮೂಲಕ 195 ಕಸದ ಬುಟ್ಟಿಗಳನ್ನು ಖರೀದಿಸಿದ್ದು, ಇದಕ್ಕಾಗಿ 1,85,250 ರೂಪಾಯಿ ವೆಚ್ಚ ಮಾಡಿದ್ದಾರೆ. ಮಾರುಕಟ್ಟೆಯಲ್ಲಿ 100 ರಿಂದ 200 ರೂಪಾಯಿಗೆ ಸಿಗುವ ಕಸದಬುಟ್ಟಿಗಳಿಗೆ 950 ರೂಪಾಯಿ ನೀಡಿ ಖರೀದಿಸಿ ಲಕ್ಷಾಂತರ ಮೊತ್ತವನ್ನು ಕಬಳಿಸಿದ್ದಾರೆ ಎನ್ನುವುದು ಗ್ರಾಮಸ್ಥರ ದೂರು.
ಮಾರುಕೇರಿ ಗ್ರಾಮ ಪಂಚಾಯತಿಯಲ್ಲಿಯೂ ಇದಕ್ಕೆ ಪೈಪೋಟಿ ನೀಡುವ ದರ ನೀಡಿ ಸುಮಾರು 101 ಬಕೆಟ್ ಖರೀದಿಸಿದ್ದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ಈ ಬಗ್ಗೆ ಪಂಚಾಯತ್ ಉಪಾಧ್ಯಕ್ಷರನ್ನು ಕೇಳಿದರೆ, ದುಬಾರಿ ವೆಚ್ಚದಲ್ಲಿ ಕಸದಬುಟ್ಟಿಗಳನ್ನು ಖರೀದಿಸಿರುವುದು ತಮಗೆ ಗೊತ್ತಿಲ್ಲ. ಗುಣಮಟ್ಟದ ಆಧಾರದಲ್ಲಿ ಟೆಂಡರ್ ಕರೆದು ಖರೀದಿ ಪ್ರಕ್ರಿಯೆ ನಡೆಸಲಾಗಿದೆ. ಹಾಗೇನಾದರೂ ಅವ್ಯವಹಾರ ಆಗಿದ್ದರೆ ಈ ಬಗ್ಗೆ ತನಿಖೆ ನಡೆಯಲಿ ಎಂದರು.
ಈ ರೀತಿಯ ದುಬಾರಿ ಕಸದ ಬುಟ್ಟಿ ಖರೀದಿ ಕೇವಲ ಶಿರಾಲಿ ಹಾಗೂ ಮಾರುಕೇರಿ ಗ್ರಾಮ ಪಂಚಾಯತ್ ಮಾತ್ರವಲ್ಲದೇ ಜಿಲ್ಲೆಯ ಇತರೆ ಪಂಚಾಯಿತಿಗಳಲ್ಲೂ ನಡೆದಿರುವ ಆರೋಪವಿದೆ.
ಇದನ್ನೂ ಓದಿ: ಹದಗೆಟ್ಟ ಶಿರಸಿ-ಕುಮಟಾ ರಸ್ತೆ: ಜನರಿಂದ ಹಿಡಿಶಾಪ