ಕಾರವಾರ : ಜಿಲ್ಲೆಯ ಅಂಕೋಲಾ ರಾಮನಗುಳಿ ಸೇರಿದಂತೆ ಕೆಲ ಭಾಗಗಳಲ್ಲಿ ಪ್ರವಾಹಕ್ಕೆ ಸಿಲುಕಿಕೊಂಡವರಿಗೆ ಆಹಾರ, ಔಷಧಗಳನ್ನು ಪೂರೈಕೆ ಮಾಡಲು ತೆರಳಿದ್ದ ನೌಕಾನೆಲೆಯ ಹೆಲಿಕಾಪ್ಟರ್ ಹವಾಮಾನ ವೈಪರೀತ್ಯದಿಂದಾಗಿ ವಾಪಸ್ ಆಗಿದೆ.
ಭಾರಿ ಮಳೆಯಿಂದಾಗಿ ನಿರಂತರವಾಗಿ ಕದ್ರಾ ಜಲಾಶಯದಿಂದ ನೀರನ್ನು ಹೊರಬಿಡುತ್ತಿದ್ದು, ಜಿಲ್ಲೆಯ ಕರಾವಳಿ ನದಿಯಂಚಿನ ಭಾಗಗಳು ಮುಳುಗಡೆಯಾಗಿವೆ. ಅಂಕೋಲಾ ಭಾಗಳಲ್ಲಿಯೂ ಗಂಗಾವಳಿ ತುಂಬಿ ಹರಿಯುತ್ತಿದ್ದು, ಅನೇಕರು ನಡುಗಡ್ಡೆಗಳಲ್ಲಿ ಸಿಲುಕಿಕೊಂಡಿದ್ದಾರೆ. ಇಲ್ಲಿರುವವರನ್ನು ರಕ್ಷಣೆ ಮಾಡಲು ಮತ್ತು ಅವರಿಗೆ ತುರ್ತಾಗಿ ಆಹಾರ, ಔಷಧ, ನೀರು ಬಟ್ಟೆಗಳನ್ನು ಪೂರೈಸಲು ಕಾರವಾರ ಜಿಲ್ಲಾಡಳಿತ ನೌಕಾನೆಲೆಯ ಹೆಲಿಕಾಪ್ಟರ್ ಸಹಾಯ ಕೇಳಿತ್ತು.
ಅದರಂತೆ ಇಲ್ಲಿನ ಕದಂಬ ನೌಕಾನೆಲೆಯಿಂದ ಹೊರಟ ಹೆಲಿಕಾಪ್ಟರ್ ಅಂಕೋಲಾ, ಕುಮಟಾ ಹಾಗೂ ಕಾರವಾರದ ಕೆಲವು ಭಾಗಗಳ ಸಂತ್ರಸ್ತರಿಗೆ ಸಾಮಗ್ರಿಗಳನ್ನು ತಲುಪಿಸಲು ಪ್ರಯತ್ನ ನಡೆಸಿತ್ತಾದರೂ ಮೋಡ ಕೆಳಭಾಗದಲ್ಲಿರುವ ಕಾರಣ ಪ್ರದೇಶಗಳನ್ನು ಗುರುತಿಸಲಾಗದೇ ಕೆಲ ಹೊತ್ತು ಹಾರಾಟ ನಡೆಸಿ ವಾಪಸ್ ಆಗಿದೆ. ಇದರಿಂದ ಹೆಲಿಕಾಪ್ಟರ್ ಮೂಲಕ ಕೊಂಡೊಯ್ದ ಆಹಾರ ಪೊಟ್ಟಣ ಹಾಗೂ ಇತರ ವಸ್ತುಗಳನ್ನು ವಾಪಸ್ ತಂದು ಹೆಲಿಕಾಪ್ಟರ್ ನಿಂದ ಹೊರಗಿಳಿಸಿ ಪರಿಹಾರ ಕೇಂದ್ರಗಳಿಗೆ ಕಳುಹಿಸಲಾಗಿದೆ. ಆದರೆ ಜನರನ್ನು ಸಂಪರ್ಕಿಸಲು ಪ್ರಯತ್ನ ನಡೆಸಿರುವ ಜಿಲ್ಲಾಡಳಿತ ಕೆಲವೆಡೆ ಬೋಟ್ ಮೂಲಕ ಆಹಾರ ಪೊಟ್ಟಣಗಳನ್ನು ಕಳುಹಿಸಲು ಪ್ರಯತ್ನ ಮುಂದುವರಿಸಿದೆ.