ಕಾರವಾರ: ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರುವ ಉತ್ತರ ಕನ್ನಡ ಜಿಲ್ಲೆಯ ಕರಾವಳಿಯಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದ್ದು, ಕಾರವಾರದ ರವೀಂದ್ರನಾಥ ಟ್ಯಾಗೋರ್ ಕಡಲತೀರದಲ್ಲಿ ಪೊಲೀಸ್ ಇಲಾಖೆ ಡ್ರೋನ್ ಕಣ್ಗಾವಲು ಇರಿಸಿದೆ.
ನಿಷೇಧಾಜ್ಞೆ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಯಾವುದೇ ಸಾರ್ವಜನಿಕ ಪ್ರದೇಶಗಳಲ್ಲಿ ಡಿ.31ರಂದು ಸಂಜೆ 4 ಗಂಟೆಯಿಂದ ಜನ ಸೇರುವಂತಿಲ್ಲ. ಮುಖ್ಯವಾಗಿ ನಗರದ ರವೀಂದ್ರನಾಥ ಕಡಲತೀರದಲ್ಲಿ ಯಾರೂ ಆಗಮಿಸದಂತೆ ಸೂಚಿಸಲಾಗಿದೆ. ಹೀಗಾಗಿ ಕಡಲತೀರಕ್ಕೆ ಆಗಮಿಸುವವರನ್ನು ಪತ್ತೆ ಹಚ್ಚಲು ಡ್ರೋನ್ ಬಳಸಲಾಗುತ್ತಿದ್ದು, 4 ಗಂಟೆಯಿಂದಲೇ ಡ್ರೋನ್ ಹಾರಾಟ ನಡೆಸಿದೆ.
ಇದನ್ನೂ ಓದಿ : ಹೊಸ ವರ್ಷಾಚರಣೆಗೆ ಬ್ರೇಕ್ ಹಾಕಿದ ಸರ್ಕಾರ: ನಗರದ ಹಾಟ್ ಸ್ಪಾಟ್‌ಗಳಿಗೆ ಸಿಸಿ ಕ್ಯಾಮೆರಾ ಅಳವಡಿಕೆ!
ಅಲ್ಲದೆ ಪೊಲೀಸರು ಗಸ್ತು ತಿರುಗುತ್ತಿದ್ದು, ಜೊತೆಗೆ ಸೂಕ್ತ ಬಂದೋಬಸ್ತ್ ಕೈಗೊಳ್ಳಲಾಗಿದೆ. ಸಂಜೆ ಕಡಲತೀರದಲ್ಲಿ ಐದು ಅಥವಾ ಐದಕ್ಕಿಂತ ಹೆಚ್ಚು ಜನರು ಯಾವುದೇ ಕಾರಣಕ್ಕೂ ಸೇರಬಾರದು. ಹೊಸ ವರ್ಷಾಚರಣೆಗೆ ಅಥವಾ ಇನ್ಯಾವುದೇ ಕಾರಣದ ಮೋಜು- ಮಸ್ತಿಗೆ ಕಡಲತೀರದತ್ತ ಬರದಂತೆ ಪೊಲೀಸ್ ಇಲಾಖೆ ಎಚ್ಚರಿಕೆ ನೀಡಿದೆ. ಒಂದು ವೇಳೆ ನಿಯಮ ಉಲ್ಲಂಘಿಸಿದರೆ ಅಂಥವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವುದಾಗಿಯೂ ಎಂದು ಪೊಲೀಸ್ ಇಲಾಖೆ ಎಚ್ಚರಿಸಿದೆ.