ಕಾರವಾರ: ವೈದ್ಯರ ನಿರ್ಲಕ್ಷದಿಂದ ಬಾಣಂತಿ ಸಾವನ್ನಪ್ಪಿರುವ ಆರೋಪ ಸಂಬಂಧ ಕೂಡಲೇ ತಪ್ಪಿತಸ್ಥರ ವಿರುದ್ಧ ಸೂಕ್ತ ತನಿಖೆ ನಡೆಸಿ ಕಾನೂನು ಕ್ರಮ ಜರುಗಿಸಬೇಕು ಎಂದು ಕರ್ನಾಟಕ ದಲಿತ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಎಲಿಷಾ ಎಲಕಪಾಟಿ ಒತ್ತಾಯಿಸಿದ್ದಾರೆ.
ಕಾರವಾರದ ಜಿಲ್ಲಾ ಪತ್ರಿಕಾಭವನದಲ್ಲಿನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು. ಸೆಪ್ಟೆಂಬರ್ 3 ರಂದು ಗೀತಾ ಎಂಬ ಬಡ ಮಹಿಳೆ ಸಂತಾನಹರಣ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದ ವೇಳೆ ವೈದ್ಯರ ನಿರ್ಲಕ್ಷ್ಯದಿಂದ ಮೃತಪಟ್ಟಿರುವ ಆರೋಪ ಕೇಳಿಬಂದಿದೆ. ಈ ಘಟನೆ ನಡೆದು 15 ದಿನಗ ಕಳೆದರೂ ಈ ಬಗ್ಗೆ ಇದುವರೆಗೆ ಯಾವುದೇ ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಹೇಳಿದರು.
ಪ್ರಕರಣದಲ್ಲಿ ಭಾಗಿಯಾಗಿರುವ ವೈದ್ಯರು ಆಪರೇಷನ್ ಥಿಯೇಟರ್‌ನಲ್ಲಿ ಕೆಲಸ ಮಾಡುವ ಸಹಾಯಕ ಸಿಬ್ಬಂದಿ ಮೇಲೆ ಬಲವಂತವಾಗಿ ಆರೋಪ ಹೊರಿಸುವ ಪ್ರಯತ್ನ ಮಾಡುತ್ತಿದ್ದಾರೆಂದು ಈಗಾಗಲೇ ಸಿಬ್ಬಂದಿ ದೂರುತ್ತಿದ್ದಾರೆ. ಮಾಡಿದ ತಪ್ಪುಗಳನ್ನು ಮುಚ್ಚಿಟ್ಟು ಹೀಗೆ ಅಮಾಯಕ ಸಿಬ್ಬಂದಿಯನ್ನು ಬಲಿಪಶುಗಳನ್ನಾಗಿ ಮಾಡುವ ಪ್ರಯತ್ನ ಇನ್ನೂ ದೊಡ್ಡ ಅಪರಾಧವಾಗಿದೆ ಎಂದರು.
ಇಂತಹ ನಿರ್ಲಕ್ಷ್ಯ ಧೋರಣೆ ತೋರುವ ವೈದ್ಯರಿಂದ ಜನಸಾಮಾನ್ಯರಿಗೆ ಎಲ್ಲಾ ವೈದ್ಯರ ಮೇಲೆ ಕೆಟ್ಟ ಅಭಿಪ್ರಾಯ ಉಂಟಾಗುವ ಪರಿಸ್ಥಿತಿ ಏರ್ಪಟ್ಟಿದೆ. ಆದ್ದರಿಂದ ತಪ್ಪಿತಸ್ಥರನ್ನು ಕೂಡಲೇ ಶಿಕ್ಷಿಸಬೇಕು ಮತ್ತು ಸಾರ್ವಜನಿಕರಿಗೆ ಎಲ್ಲಾ ವೈದ್ಯರು ಒಂದೇ ತರ ಇರುವುದಿಲ್ಲ ಎಂಬ ಭಾವನೆ ಮೂಡಿಸಬೇಕೆಂದು ಆಗ್ರಹಿಸಿದ್ದಾರೆ.