ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕೆಲ ಠಾಣಾ ಮಟ್ಟದ ಪೊಲೀಸ್ ಅಧಿಕಾರಿಗಳು ತಮ್ಮ ಮೇಲಾಧಿಕಾರಿಗಳ ಹೆಸರು ಹೇಳಿಕೊಂಡು ಹಣ ವಸೂಲಿಗೆ ಇಳಿದಿರುವ ಗಂಭೀರ ಆರೋಪ ಕೇಳಿ ಬಂದಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜು ಹೆಸರು ದುರ್ಬಳಕೆ ಮಾಡಿಕೊಂಡು ಇತ್ತೀಚಿನ ದಿನಗಳಲ್ಲಿ ಕೆಲ ಪೊಲೀಸರೇ ಲಂಚ ಪಡೆಯುವ, ಭ್ರಷ್ಟಾಚಾರ ನಡೆಸಿರುವ ಗಂಭೀರ ಆರೋಪಗಳು ಕೇಳಿಬಂದಿದೆ. ಜಿಲ್ಲೆಯಲ್ಲಿ ಮಾತ್ರವಲ್ಲದೆ ಜಿಲ್ಲೆಯ ಕೆಲವು ಠಾಣೆಗಳಲ್ಲಿ ಪೊಲೀಸರು ಮೇಲಾಧಿಕಾರಿಗಳಿಗೂ ಹಣ ಕೊಡಬೇಕು ಎಂದು ಜನರಿಂದ ಹಣ ಪಡೆದಿದ್ದಾರೆ ಎನ್ನಲಾಗಿದೆ.
ಈ ಕುರಿತು ಮಾಹಿತಿ ನೀಡಿರುವ ಎಸ್ಪಿ ಶಿವಪ್ರಕಾಶ್ ದೇವರಾಜು, ನಾನು ಯಾರ ಬಳಿ ಹಣ ಕೇಳುವುದಿಲ್ಲ. ಮೇಲಾಧಿಕಾರಿಗೆ ಎಂದು ಹಣ ಕೇಳಿದರೆ ಪೊಲೀಸರಿಗೆ ಯಾವ ವಿಷಯಕ್ಕೂ ಹಣ ಕೊಡಬೇಡಿ, ಸರ್ಕಾರ ನಮಗೆ ಬಂಧಿಸುವ, ಕ್ರಮ ಕೈಗೊಳ್ಳುವ ಬಲ ಕೊಟ್ಟಿದೆಯೆಂದ್ರೆ ಅದು ಜನ ಸೇವೆ ಮಾಡಲಿ ಅಂತಾ. ಆದರೆ ಇದನ್ನೇ ದುರ್ಬಳಕೆ ಮಾಡಿಕೊಂಡು ಜನರಿಂದ ಕೆಲ ವಿಚಾರದಲ್ಲಿ ಹಣ ಪಡೆಯುವುದು ಸರಿಯಲ್ಲ. ಇದರಲ್ಲಿ ಯಾರೇ ಭಾಗಿಯಾಗಿದ್ದರೂ ನಾನು ಬಿಡುವುದಿಲ್ಲ. ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುತ್ತೇನೆ ಎಂದು ಖಡಕ್ ಎಚ್ಚರಕೆ ರವಾನಿಸಿದ್ದಾರೆ.
ಇನ್ನು, ಜನರ ಬಳಿ ಪೊಲೀಸರು ಮೇಲಾಧಿಕಾರಿಗಳಿಗೆ ಹಣ ಕೊಡಬೇಕು ಎಂದು ಕೇಳಿದ್ರೆ ಈ ಬಗ್ಗೆ ಆಯಾ ಠಾಣೆಯಲ್ಲಿರುವ ದೂರು ಪೆಟ್ಟಿಗೆಯಲ್ಲಿ ದೂರು ನೀಡಬಹುದು. ಇಲ್ಲವಾದಲ್ಲಿ ದಾಖಲೆಗಳ ಸಮೇತ ಈ ಬಗ್ಗೆ ನನಗೆ ವೈಯಕ್ತಿಕವಾಗಿಯೂ ದೂರು ನೀಡಬಹುದು. ಈ ರೀತಿ ಮೇಲಾಧಿಕಾರಿಗಳ ಹೆಸರು ಹೇಳಿಕೊಂಡು ಹಣ ವಸೂಲಿ ಮಾಡುವ ಸಂಸ್ಕೃತಿ ನಿಲ್ಲಿಸಬೇಕಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.