ಶಿರಸಿ (ಉತ್ತರ ಕನ್ನಡ): ಅನಾನಸ್ ಬೆಳೆ ಬೆಳೆದು ಕೊರೊನಾ ಲಾಕ್ ಡೌನ್‌ನಿಂದ ನಷ್ಟ ಅನುಭವಿಸುತ್ತಿದ್ದ ರೈತರಿಗೆ ಚೈತನ್ಯ ತುಂಬಲು ಶಿರಸಿ ತೋಟಗಾರಿಕಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ವಿಶೇಷ ಮುತುವರ್ಜಿ ವಹಿಸಿದ್ದಾರೆ. ಸುಮಾರು 500 ಟನ್‌ಗಳಷ್ಟು ಅನಾನಸ್ ಹಣ್ಣುಗಳ ಮಾರಾಟಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಬೆಳೆ ಹಾಳಾಗಿ ಹೋಗಲಿದೆ ಎಂಬ ಭಯದಲ್ಲಿದ್ದ ರೈತರು ಈಗ ನಿರಾಳರಾಗಿದ್ದಾರೆ. ಈ ಬಗ್ಗೆ ಈಟಿವಿ ಭಾರತ್ ವರದಿ ಮಾಡಿ ಸರ್ಕಾರದ ಗಮನ ಸೆಳೆದಿತ್ತು.
ಬನವಾಸಿ, ಸೊರಬ, ಸಿದ್ದಾಪುರ ಸೇರಿದಂತೆ ಜಿಲ್ಲೆಯ ವಿವಿಧ ಭಾಗದಲ್ಲಿ ಬೆಳೆದ ಸುಮಾರು 50 ಸಾವಿರ ಟನ್ ಗಳಷ್ಟು ಅನಾನಸ್ ಹಣ್ಣಿಗೆ ಮಾರುಕಟ್ಟೆ ಸಿಗದೆ ರೈತರು ಪರದಾಡುತ್ತಿದ್ದರು. ಬೆಳೆ ಬೆಳೆಯಲು ಹಾಕಿದ ಅಸಲೂ ಕೂಡ ಸಿಗದೆ ಹಣ್ಣುಗಳು ಕೊಳೆತು ಹೋಗುವ ವಾತಾವರಣವಿತ್ತು. ಆದರೀಗ ಹಣ್ಣುಗಳನ್ನು ಖರೀದಿಸಲು ಬೆಂಗಳೂರಿನ ಎನ್.ಜಿ.ಒ. ಮುಂದೆ ಬಂದಿದೆ. ಈ ಸರ್ಕಾರೇತರ ಸಂಸ್ಥೆ ಸುಮಾರು 250 ಟನ್ ಹಣ್ಣುಗಳನ್ನು ರೈತರಿಂದ ಖರೀದಿಸಲಿದೆ. ನೋ ಪ್ರಾಪಿಟ್ ನೋ ಲಾಸ್ ಸ್ಕೀಮ್ ಅಡಿಯಲ್ಲಿ ವ್ಯಾಪಾರ ನಡೆಯಲಿದ್ದು, ರೈತರಿಗೆ ಕೆ.ಜಿಗೆ 10 ರೂ. ಹಣ ದೊರೆಯಲಿದೆ.
ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್ ತಮ್ಮ ಕ್ಷೇತ್ರ ವ್ಯಾಪ್ತಿಯ ಬನವಾಸಿ ಭಾಗದ ರೈತರ ಬವಣೆ ನೀಗಿಸಲು ಮುಂದಾಗಿದ್ದು, 240 ಟನ್ ಅನಾನಸ್ ಖರೀದಿಸಲು ತೀರ್ಮಾನಿಸಿದ್ದಾರೆ. ಸ್ವಕ್ಷೇತ್ರದ ಬಿಪಿಎಲ್ ಮತ್ತು ಅಂತ್ಯೋದಯ ಕಾರ್ಡ್‌ದಾರರಿಗೆ ಹೆಬ್ಬಾರ್ ಅವರು ಆಹಾರದ ಕಿಟ್ ನೀಡಲಿದ್ದು, ಅದರಲ್ಲಿ 4 ಕೆಜಿ ಅನಾನಸ್ ಹಣ್ಣುಗಳನ್ನೂ ಹಾಕಿ ರೈತರಿಗೆ ಸಹಾಯ ಮಾಡಲಿದ್ದಾರೆ. ಇದು ಮೊದಲ ಹಂತದ ಖರೀದಿಯಾಗಿದ್ದು, ಮುಂದಿನ ದಿನಗಳಲ್ಲಿ ರೈತರಿಗೆ ಮತ್ತಷ್ಟು ಸಹಾಯಹಸ್ತ ಚಾಚಲಿದ್ದಾರೆ ಎಂದು ಅಭಿಮಾನಿಗಳು ತಿಳಿಸಿದ್ದಾರೆ.
ಅನಾನಸ್ ಬೆಳೆದು ಕಷ್ಟದಲ್ಲಿದ್ದ ರೈತರ ಬಾಳಲ್ಲಿ ಚೈತನ್ಯ ಮೂಡಿಸುವ ಕೆಲಸ ಇಲಾಖೆ ಹಾಗೂ ಸಚಿವರಿಂದ ನಡೆದಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಹಣ್ಣುಗಳ ಮಾರಾಟಕ್ಕೆ ವ್ಯವಸ್ಥೆಯಾಗಲಿ ಅನ್ನೋದು ರೈತರ ಬೇಡಿಕೆ.