ಕಾರವಾರ: ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಕೋವಿಡ್ ಆಸ್ಪತ್ರೆಯ ನವೀಕೃತ ತೀವ್ರ ನಿಗಾ ಘಟಕ ವಾರ್ಡ್ಗೆ ಜಿಲ್ಲಾಧಿಕಾರಿ ಡಾ. ಹರೀಶಕುಮಾರ ಇಂದು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಪ್ರಸ್ತುತ ತೀವ್ರ ನಿಗಾ ಘಟಕದಲ್ಲಿ 35 ಐಸಿಯು ಹಾಸಿಗೆಗಳ ವ್ಯವಸ್ಥೆ ಇದ್ದು, 33 ವೆಂಟಿಲೇಟರ್ಗಳ ಸೌಲಭ್ಯ ಹಾಗೂ 9 ಹೈ-ಫ್ಲೋ ಆಕ್ಸಿಜೆನ್ ಮಶೀನ್‍ಗಳನ್ನು ಹೊಸತಾಗಿ ಅಳವಡಿಸಲಾಗಿದೆ. ಇದಕ್ಕೆ ಬೇಕಾದ ಹೆಚ್ಚಿನ ಆಕ್ಸಿಜೆನ್‍ಗಳನ್ನು ಪಡೆಯಲು ಲಿಕ್ವಿಡ್ ಆಕ್ಸಿಜೆನ್ ಪ್ಲ್ಯಾಂಟ್ನನ್ನು ಅತೀ ಶೀಘ್ರದಲ್ಲಿ ಸರ್ಕಾರದಿಂದ ಪಡೆಯಲಾಗುವುದು ಎಂದು ಇದೇ ವೇಳೆ ಶಸ್ತ್ರ ಚಿಕಿತ್ಸಕ ಡಾ. ಶಿವಾನಂದ ಕುಡ್ತಾಲಕರ್ ಮಾಹಿತಿ ನೀಡಿದರು.
ಪ್ರಧಾನ ಮಂತ್ರಿ ಯೋಜನೆಯಿಂದ ಬಂದ ಅತ್ಯಾಧುನಿಕ ವೆಂಟಿಲೇಟರ್ಗಳು, ಹೈ-ಫ್ಲೋ ಆಕ್ಸಿಜೆನ್ ಡೆಲಿವರಿಯನ್ನು ನೀಡುವ ಸಾಮರ್ಥ್ಯವನ್ನು ಹೊಂದಿವೆ. ಅದರಂತೆ ತೀವ್ರ ನಿಗಾ ಘಟಕದಲ್ಲಿ ಒಂದು ಡಯಾಲಿಸಿಸ್ ಯಂತ್ರವನ್ನು ಅಳವಡಿಸಲಾಗುತ್ತಿದ್ದು, ಇದರಿಂದ ಕೋವಿಡ್ ಪಾಸಿಟಿವ್ ಇರುವ ಕಿಡ್ನಿ ತೊಂದರೆಯಿಂದ ಬಳಲುತ್ತಿರುವ ರೋಗಿಗಳು ತುರ್ತಾಗಿ ಚಿಕಿತ್ಸೆ ಪಡೆಯಲು ಅನುಕೂಲಕರವಾಗಿರುತ್ತದೆ ಎಂದು ಅರವಳಿಕೆ ವಿಭಾಗದ ಮುಖ್ಯಸ್ಥರಾದ ಡಾ. ಮಂಜುನಾಥ ಭಟ್ ಜಿಲ್ಲಾಧಿಕಾರಿಗೆ ಮಾಹಿತಿ ನೀಡಿದರು.
ಲಕ್ಷಣರಹಿತ ಸೋಂಕಿತರ ಚಿಕಿತ್ಸೆಗೆ 70 ಹಾಸಿಗೆಗಳ ಕೋವಿಡ್ ವಾರ್ಡ್ನನ್ನು ಸಹ ಪರಿಶೀಲಿಸಿದ ಜಿಲ್ಲಾಧಿಕಾರಿ, ಅಲ್ಲಿಯ ರೋಗಿಗಳ ಆರೈಕೆಯ ಕುರಿತು ಮೇಲ್ವಿಚಾರಣೆ ನಡೆಸಿದರು. ಅಲ್ಲದೇ ರೋಗಿಗಳ ಮನರಂಜನೆಗಾಗಿ ಒಂದು ಟಿ.ವಿ. ಅಳವಡಿಸುವ ವ್ಯವಸ್ಥೆಯನ್ನು ಮಾಡುವಂತೆ ವೈದ್ಯಾಧಿಕಾರಿಗಳಿಗೆ ಸೂಚಿಸಿದರು.
ಇದುವರೆಗೂ 458 ಸೋಂಕಿತ ರೋಗಿಗಗಳು ದಾಖಲಾಗಿದ್ದು, 356 ಸೋಂಕಿತರು ಬಿಡುಗಡೆ ಹೊಂದಿದ್ದಾರೆ. ಇದರಲ್ಲಿ ಕೋವಿಡ್ ಐಸಿಯುನಲ್ಲಿ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ, ಸುಮಾರು 110 ಕೋವಿಡ್ ಸೋಂಕಿತರು ಗುಣಮುಖರಾಗಿ ಬಿಡುಗಡೆ ಹೊಂದಿರುತ್ತಾರೆ. ಪ್ರತಿಶತದ ಮರಣದ ಪ್ರಮಾಣವು ತೀರಾ ಕಡಿಮೆ ಅಂಕಿಅಂಶಗಳನ್ನು ಹೊಂದಿದೆ ಎಂಬ ಮಾಹಿತಿಯನ್ನು ಕ್ರಿಮ್ಸ್ ನಿರ್ದೇಶಕ ಡಾ. ಗಜಾನನ ನಾಯಕ ಜಿಲ್ಲಾಧಿಕಾರಿಗೆ ನೀಡಿದರು.