ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಸೋಂಕಿತ ಪ್ರಕರಣಗಳು ಹೆಚ್ಚುತ್ತಿದ್ದರೂ ಸದ್ಯದ ಮಟ್ಟಿಗೆ ಆಕ್ಸಿಜನ್ ಕೊರತೆಯಿಲ್ಲ. ಪ್ರತಿನಿತ್ಯ ಬೇಡಿಕೆ ಇರುವ ಪ್ರಮಾಣದಲ್ಲಿಯೇ ಪೂರೈಕೆಯಿದ್ದು, ಆಕ್ಸಿಜನ್ ಸಮಸ್ಯೆ ತಲೆದೋರದಂತೆ ಕ್ರಮ ಕೈಗೊಂಡಿರುವುದಾಗಿ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಮಾಹಿತಿ ನೀಡಿದ್ದಾರೆ.
ಕಾರವಾರದಲ್ಲಿ ಮಾಧ್ಯಮದವರೊಂದಿಗೆ ಮಾಹಿತಿ ಹಂಚಿಕೊಂಡಿರುವ ಅವರು, ಉತ್ತರ ಕನ್ನಡ ಜಿಲ್ಲೆಯ ಕುಮಟಾದಲ್ಲಿ ಆಕ್ಸಿಜನ್ ರೀಫಿಲ್ಲಿಂಗ್ ಪ್ಲಾಂಟ್ ಇದೆ. ಅದರ ಮೂಲಕವೇ ಕಾರವಾರದ ಮೆಡಿಕಲ್ ಕಾಲೇಜು ಆಸ್ಪತ್ರೆ ಸೇರಿದಂತೆ ಎಲ್ಲಾ ಆಸ್ಪತ್ರೆಗಳಿಗೂ ಆಕ್ಸಿಜನ್ ಪೂರೈಕೆ ಮಾಡಲಾಗುತ್ತಿದೆ. ಈ ಹಿಂದೆ ಕೇವಲ ಮೂರು ಕಿಲೋ ಲೀಟರ್ ಆಕ್ಸಿಜನ್ ಸಾಕಾಗುತ್ತಿತ್ತು. ಆದ್ರೀಗ ಸೋಂಕಿತರ ಸಂಖ್ಯೆ ಹೆಚ್ಚಾಗಿದ್ದು, ಪ್ರತಿನಿತ್ಯ ಸುಮಾರು ನಾಲ್ಕೂವರೆ ಕಿಲೋ ಲೀಟರ್ ಬೇಡಿಕೆಯಿದೆ. ಆದರೆ, ಕುಮಟಾದ ಪ್ಲಾಂಟ್ನಲ್ಲಿ 13 ಕಿಲೋ ಲೀಟರ್ ಸಾಮರ್ಥ್ಯದ ಟ್ಯಾಂಕ್ ಇದೆ. ಇದರಿಂದ ಇಲ್ಲಿ ರೀಫಿಲ್ಲಿಂಗ್ ಆಗಿ ಅಷ್ಟೇ ಪ್ರಮಾಣದ ಪೂರೈಕೆಯಿದೆ ಎಂದರು.
ಇನ್ನು ಕುಮಟಾ ಪ್ಲಾಂಟ್ಗೆ ಮೂರು ದಿನಕ್ಕೊಮ್ಮೆ ಬಳ್ಳಾರಿಯಿಂದ ಲಿಕ್ವಿಡ್ ಆಕ್ಸಿಜನ್ ಬರುತ್ತಿದೆ. 30 ಜಂಬೋ ಸಿಲಿಂಡರ್, ಲಿಕ್ವಿಡ್ ಮೆಡಿಕಲ್ ಆಕ್ಸಿಜನ್ 168 ಕ್ಯೂಬಿಕ್ ಮೀಟರ್ ಸಾಮರ್ಥ್ಯದ ದೊಡ್ಡ ಸಿಲಿಂಡರ್ಗೆ ತುಂಬುತ್ತಿದ್ದಾರೆ. ಪ್ರತಿನಿತ್ಯ ಆಕ್ಸಿಜನ್ ಪ್ಲಾಂಟ್ನಲ್ಲಿ ಸಾವಿರ ಜಂಬೋ ಸಿಲಿಂಡರ್ ರೋಟೇಶನ್ ಆಗುತ್ತಿದೆ. ಇದರಿಂದ ಜಿಲ್ಲೆಯಲ್ಲಿ ಸದ್ಯದ ಮಟ್ಟಿಗೆ ಯಾವುದೇ ಕೊರತೆ ಇಲ್ಲ ಎಂದರು.
ಓದಿ: ಚಾಮರಾಜನಗರ ಆಸ್ಪತ್ರೆಯಲ್ಲಿ ರೋಗಿಗಳ ಸಾವು ಪ್ರಕರಣ: ನ್ಯಾಯಾಂಗ ತನಿಖೆಗೆ ಆದೇಶ