ಕಾರವಾರ: ಕೆಎಸ್‌ಆರ್‌ಟಿಸಿ ಮುಷ್ಕರದ ಹಿನ್ನೆಲೆ ಜಿಲ್ಲೆಯಲ್ಲಿ ಸಾರ್ವಜನಿಕರ ಸಂಚಾರಕ್ಕೆ ತೊಂದರೆಯಾಗದಂತೆ ಬಸ್‌ಗಳನ್ನು ಓಡಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಕೆಎಸ್‌ಆರ್‌ಟಿ ಹಾಗೂ ಆರ್‌ಟಿಒ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ. ಸೂಚಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿಯ ನ್ಯಾಯಾಲಯ ಸಭಾಂಗಣದಲ್ಲಿ ಕೆಎಸ್‌ಆರ್‌ಟಿಸಿ, ಸಾರಿಗೆ ಇಲಾಖೆ ಹಾಗೂ ವಿವಿಧ ಖಾಸಗಿ ವಾಹನಗಳ ಸಂಸ್ಥೆಯ ಅಧಿಕಾರಿಗಳೊಂದಿಗೆ ಪೂರ್ವಭಾವಿ ಸಭೆ ನಡೆಸಿ ಅವರು ಮಾತನಾಡಿದರು. ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಏ. 7ರಿಂದ ರಾಜಾದ್ಯಂತ ಕೆಎಸ್‌ಆರ್‌ಟಿಸಿ ನೌಕರರು ಬಸ್ ಸಂಚಾರ ಸ್ಥಗಿತಗೊಳಿಸಿ ಮುಷ್ಕರ ನಡೆಸಲು ತಿರ್ಮಾನಿಸಿದ್ದು, ಇದರ ಮಧ್ಯೆ ಸಾರ್ವಜನಿಕರಿಗೆ ತೊಂದರೆಯಾಗದಂತೆ ಬಸ್‌ಗಳ ಸಂಚಾರಕ್ಕೆ ಕೆಎಸ್‌ಆರ್‌ಟಿ ಹಾಗೂ ಆರ್‌ಟಿಒ ಅಧಿಕಾರಿಗಳು ಕೈಗೊಂಡ ಮುನ್ನೆಚರಿಕೆ ಕ್ರಮಗಳ ಕುರಿತು ಸಮಗ್ರ ಮಾಹಿತಿ ಪಡೆದುಕೊಂಡರು.
ಮುಷ್ಕರದ ಕಾರಣ ಜನರಿಗೆ ತೊಂದರೆ ಆಗುವ ಸಾಧ್ಯತೆಯಿದೆ. ಹೀಗಾಗಿ ಕೆಎಸ್‌ಆರ್‌ಟಿ ಹಾಗೂ ಆರ್‌ಟಿಒ ಅಧಿಕಾರಿಗಳು ಪೊಲೀಸ್ ಇಲಾಖೆಯೊಂದಿಗೆ ಸಮನ್ವಯ ಮಾಡಿಕೊಂಡು ಪೊಲೀಸ್ ಭದ್ರತೆಯಲ್ಲಿ ಬಸ್‌ಗಳ ಸಂಚಾರಕ್ಕೆ ಕ್ರಮ ಕೈಗೊಳ್ಳಬೇಕು. ಒಂದು ವೇಳೆ ಕೆಎಸ್‌ಆರ್‌ಟಿಸಿ ಬಸ್‌ಗಳು ಲಭ್ಯವಿಲ್ಲದಿದ್ದಲ್ಲಿ ಜನರ ಸಂಚಾರಕ್ಕೆ ಅಗತ್ಯವಿರುವಲ್ಲಿ ಖಾಸಗಿ ಮ್ಯಾಕ್ಸಿ ಕ್ಯಾಬ್, ಟೆಂಪೋ ಟ್ರಾವೆಲ್ಸ್ ಬಳಸಬೇಕು. ಸಾರ್ವಜನಿಕರ ಹಿತದೃಷ್ಟಿಯಿಂದ ಖಾಸಗಿ ವಾಹನಗಳ ಸಂಚಾರಕ್ಕೆ ಆರ್‌ಟಿಒ ಅಧಿಕಾರಿಗಳು ತಾತ್ಕಾಲಿಕ ಸಂಚಾರ ಪರವಾನಗಿ ನೀಡಬೇಕು ಎಂದರು.
ಹೋರಾಟ, ಪ್ರತಿಭಟನೆ, ಮುಷ್ಕರ ನಡೆಸಲು ಪ್ರತಿಯೊಬ್ಬರಿಗೂ ಕಾನೂನಿನಲ್ಲಿ ಅವಕಾಶವಿದೆ. ಹಾಗಂತ ಎಲ್ಲೆ ಮೀರಿ ನಡೆದುಕೊಳ್ಳುವುದು ಸರಿಯಾದ ಬೆಳವಣಿಗೆಯಲ್ಲ. ಹೀಗಾಗಿ ಯಾವುದೇ ಅಹಿತಕರ ಘಟನೆಗಳನ್ನು ನಡೆಸದಂತೆ ಕಾನೂನು ಚೌಕಟ್ಟಿನಲ್ಲಿ ಮುಷ್ಕರವಿರಬೇಕು. ಯಾರಾದರೂ ಪ್ರಯಾಣಿಕರಿಗೆ ಹಾಗೂ ಸಾರ್ವಜನಿಕ ಆಸ್ತಪಾಸ್ತಿಗೆ ಹಾನಿಯನ್ನುಂಟು ಮಾಡಿದರೆ ಅಂತಹವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದರು.