ಶಿರಸಿ: ಯಾವುದೇ ಕಾರ್ಯಕ್ರಮ ಇರಲಿ ಬಂದ ಅಥಿತಿಗಳಿಗೆ ಸಿಹಿ ನೀಡಿ ಮೃಷ್ಟಾನ್ನ ಭೋಜನ ನೀಡುವ ಮೂಲಕ ಅಥಿತಿ ಸತ್ಕಾರ ಮಾಡುವುದು ಸಂಪ್ರದಾಯ.
ಆದರೆ, ಯಲ್ಲಾಪುರ ತಾಲೂಕಿನ ಚಂದಗುಳಿಯಲ್ಲಿ ನಿನ್ನೆ ನಡೆದ ಉಪನಯನವೊಂದರಲ್ಲಿ ವಿತರಿಸಿದ ವಿಭಿನ್ನ ಉಂಡೆ ಬಂದಂತಹ ಎಲ್ಲ ಅತಿಥಿಗಳನ್ನು ಮೆಚ್ಚಿಸುವಂತೆ ಮಾಡಿತ್ತು.
ಅಲ್ಲಿ ವಿತರಿಸಿದ್ದು ಯಾವುದೇ ಸಿಹಿಯಾದ ಉಂಡೆಯಾಗಿರದೇ ಬೀಜದುಂಡೆಯಾಗಿತ್ತು. ವೀಣಾ ಹಾಗೂ ರಾಮಚಂದ್ರ ವೈದ್ಯ ದಂಪತಿಗಳ ಪುತ್ರ ಆದಿತ್ಯ(ಜಯಶೀಲ)ನ ಉಪನಯನ ಉತ್ತರ ಕನ್ನಡದ ಯಲ್ಲಾಪುರ ತಾಲೂಕಿನ ಚಂದಗುಳಿ ಗಂಟೆ ಗಣಪತಿ ಸನ್ನಿಧಾನದಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿತ್ತು. ಅಲ್ಲಿ ಬೀಜದುಂಡೆ ಹಂಚಿ ಪರಿಸರ ಕಾಳಜಿ ಮೆರದಿದ್ದಾರೆ.
ನಮ್ಮ ಮಗನ ಉಪನಯನ ವಿಭಿನ್ನವಾಗಿರಬೇಕು. ಈ ಶುಭಕಾರ್ಯದ ಸವಿನೆನಪು ಚಿರಸ್ಥಾಯಿಯಾಗಿರಬೇಕು ಎನ್ನುವ ಉದ್ದೇಶದಿಂದ ಆಯ್ಕೆ ಮಾಡಿಕೊಂಡಿದ್ದು ಪರಿಸರ ಜಾಗೃತಿ. ಈತನ ಉಪನಯನದ ಹೆಸರಿನಲ್ಲಿ ನೂರಾರು ಗಿಡಗಳು ಅಲ್ಲಲ್ಲಿ ಬೆಳೆದು ನಿಲ್ಲಲಿ, ಈ ಮೂಲಕ ಹಸಿರು ಪರಿಸರ ಹೆಚ್ಚಾಗಲಿ ಎಂಬ ಉದ್ದೇಶದಿಂದ ಬೀಜದುಂಡೆಗಳನ್ನು ತಯಾರಿಸಿ, ಬಂದಂತಹ ಅತಿಥಿಗಳಿಗೆ 'ಆದಿತ್ಯನ ಆಧ್ಯಾತ್ಮಿಕ ಪಯಣಕ್ಕೆ ಸಾಕ್ಷಿಯಾಗಿ ಹರಸಿ. ಪ್ರೀತಿಯಿಂದ ನಾವು ನೀಡುವ ಬೀಜಗಳನ್ನು ಪಸರಿಸಿ' ಎಂಬ ಸಂದೇಶದೊಂದಿಗೆ ವಿತರಿಸಿದ್ದಲ್ಲದೇ, ಇದನ್ನು ನಿಮ್ಮ ಮನೆಯ ಸುತ್ತಮುತ್ತಲಿನ ಖಾಲಿ ಪ್ರದೇಶದಲ್ಲಿ ಹಾಕುವುದರ ಮೂಲಕ ಹಸಿರು ಪರಿಸರ ಹೆಚ್ಚಾಗಲು ಕೈಜೋಡಿಸಿ ಎಂಬ ಮನವಿ ಮಾಡಿಕೊಳ್ಳಲಾಯಿತು.
ಅತಿಥಿಗಳಿಗೆ ವಿತರಿಸಲು ಎರಡು ಜಾತಿಯ ಮುರುಗಲ, ನೇರಳೆ, ಹಲಸು ಮುಂತಾದ ಬೀಜಗಳುಳ್ಳ ಸುಮಾರು 1200 ಹೆಚ್ಚು ಬೀಜದುಂಡೆಗಳನ್ನು ತಯಾರಿಸಿ ವಿತರಿಸಿದ್ದೇವೆ. ಅವುಗಳಲ್ಲಿ ನೂರು ಗಿಡಗಳು ಹುಟ್ಟಿ, ಮರವಾಗಿ ಬೆಳೆದು ನಿಂತರೆ ಪರಿಸರಕ್ಕೊಂದು ಕೊಡುಗೆ ನೀಡಬೇಕೆಂಬ ನಮ್ಮ ಅಭಿಲಾಷೆ, ಶ್ರಮ ಸಾರ್ಥಕ ಎನ್ನುತ್ತಾರೆ ಈ ಬೀಜದುಂಡೆ ವಿತರಣೆಯ ರೂವಾರಿ ಆದಿತ್ಯ ಕುಟುಂಬದ ವಾನಳ್ಳಿಯ ನಾಗವೇಣಿ ಹೆಗಡೆ. ಒಟ್ಟಿನಲ್ಲಿ ಈ ರೀತಿ ಶುಭ ಕಾರ್ಯಗಳಲ್ಲಿ ಸಾಮಾಜಿಕ ಸಂದೇಶವನ್ನು, ಪರಿಸರ ಜಾಗೃತಿಯನ್ನು ಮೂಡಿಸುವಂತಾದರೆ ಶುಭ ಕಾರ್ಯ ಸಾಮಾಜಿಕ ಕಾರ್ಯವಾಗುವುದರಲ್ಲಿ ಸಂಶಯವಿಲ್ಲ.