ಕಾರವಾರ: ವಿಶ್ವವನ್ನೇ ತೀವ್ರ ಆತಂಕಕ್ಕೀಡುಮಾಡಿರುವ ಕೊರೊನಾ ಸದ್ಯ ಉತ್ತರಕನ್ನಡ ಜಿಲ್ಲೆಯಲ್ಲಿ ನಿಯಂತ್ರಣಕ್ಕೆ ಬಂದಿದೆ. ಆದರೆ, ಕೊರೊನಾಗಿಂತಲೂ ತೀವ್ರಗತಿಯಲ್ಲಿ ಹಬ್ಬುತ್ತಿರುವ ಮಂಗನ ಕಾಯಿಲೆ ಮಾತ್ರ ಜಿಲ್ಲೆಯ ಜನರಲ್ಲಿ ಆತಂಕ ಮೂಡಿದೆ. ಕಾಯಿಲೆ ನಿಯಂತ್ರಣವೇ ಇದೀಗ ಸವಾಲಾಗಿ ಪರಿಣಮಿಸಿದೆ.
ಜಿಲ್ಲೆಯಲ್ಲಿ ಈವರೆಗೆ 600ಕ್ಕೂ ಹೆಚ್ಚು ಜನರ ರಕ್ತದ ಮಾದರಿ ಪರೀಕ್ಷೆ ಮಾಡಲಾಗಿದ್ದು, 60ಕ್ಕೂ ಹೆಚ್ಚು ಜನರಲ್ಲಿ ಮಂಗನಕಾಯಿಲೆ ಇರುವುದು ಪತ್ತೆಯಾಗಿದೆ. ಅದರಲ್ಲೂ ಸಿದ್ದಾಪುರದ ಕ್ಯಾದಗಿ, ವಂದಾನೆ, ದೊಡ್ಮನೆ, ಕಬಗಾರ, ಹಸ್ವಿಗೋಳಿ ಭಾಗಗಳಲ್ಲಿ ಹೆಚ್ಚಾಗಿ ಪಾಸಿಟಿವ್ ಪ್ರಕರಣಗಳು ಕಂಡುಬರುತ್ತಿವೆ. ಈ ಕಾಯಿಲೆ ನಿಯಂತ್ರಣವು ಜಿಲ್ಲಾಡಳಿತಕ್ಕೆ ಹೊಸ ಸವಾಲಾಗಿದೆ. ಕೊರೊನಾ ವೈರಸ್ಗೆ ಹೋಲಿಸಿದರೆ ಜಿಲ್ಲೆಯಲ್ಲಿ ಮಂಗನ ಕಾಯಿಲೆಯೇ ಜೋರಾಗಿದೆ. ಒಟ್ಟು 11 ಜನರಲ್ಲಿ ದೃಢಪಟ್ಟಿದ್ದ ಕೊರೊನಾ ಸೋಂಕಿತರಲ್ಲಿ 10 ಜನ ಗುಣಮುಖರಾಗಿದ್ದು, ಓರ್ವ ಮಾತ್ರ ಕಾರವಾರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕಳೆದ ವರ್ಷ ಸಿದ್ದಾಪುರದ ಬಾಳ್ಗೊಡಿನಲ್ಲಿ ಹತ್ತಕ್ಕೂ ಹೆಚ್ಚು ಜನರು ಮಂಗನಕಾಯಿಲೆಯಿಂದ ಮೃತಪಟ್ಟಿದ್ದರು. ಅದರಲ್ಲಿ ಕೇವಲ ಆರು ಜನರ ಕುಟುಂಬಗಳಿಗೆ ಮಾತ್ರ ಪರಿಹಾರ ನೀಡಲಾಗಿದೆ. ಉಳಿದವರ ಚಿಕಿತ್ಸಾ ವರದಿಯೇ ಇಲ್ಲ. ಹಾಗಾಗಿ ನಮಗೆ ಉತ್ತಮ ಚಿಕಿತ್ಸೆ ಜೊತೆಗೆ ಸೌಲಭ್ಯಗಳನ್ನು ಕಲ್ಪಿಸಬೇಕು ಎಂಬುದು ಸ್ಥಳೀಯರ ಒತ್ತಾಯವಾಗಿದೆ.