ಕಾರವಾರ: ಅಂಗನವಾಡಿ ಕಾರ್ಯಕರ್ತೆಯರನ್ನು ಕೊರೊನಾ ಜಾಗೃತಿಗೆ ಬಳಸಿಕೊಂಡು ಮಾತೃಪೂರ್ಣ ಯೋಜನೆ ಸ್ಥಗೀತಗೊಳಿಸಲಾಗಿದೆ ಎಂಬ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆಗೆ ಶಾಸಕಿ ರೂಪಾಲಿ ನಾಯ್ಕ ಸರ್ಕಾರದ ಪರ ಗಟ್ಟಿ ದನಿಯಲ್ಲಿ ಮಾತನಾಡಿ ಗಮನ ಸೆಳೆದಿದ್ದಾರೆ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ಪ್ರಾರಂಭಿಸಿದ್ದ ಮಾತೃಪೂರ್ಣ ಯೋಜನೆಯನ್ನ ಸ್ಥಗಿತಗೊಳಿಸಲಾಗಿದೆ. ಇದರಿಂದ ಸಾಕಷ್ಟು ಸಮಸ್ಯೆ ಆಗುತ್ತಿದೆ ಎಂದು ಸೋಮವಾರ ವಿಧಾನಸಭೆಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ವಿಚಾರ ಪ್ರಸ್ತಾಪಿಸಿದರು.
ಈ ಸಂದರ್ಭದಲ್ಲಿ ಸದನದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವ ಶಶಿಕಲಾ ಜೊಲ್ಲೆ ಉಪಸ್ಥಿತರಿರದ ಕಾರಣ ಸರ್ಕಾರದ ಪರ ಶಾಸಕಿ ರೂಪಾಲಿ ನಾಯ್ಕ, ಯೋಜನೆಯನ್ನ ನಿಲ್ಲಿಸಿಲ್ಲ. ಕೊರೊನಾ ಸಂದರ್ಭದಲ್ಲಿ ನಮ್ಮ ಕ್ಷೇತ್ರದಲ್ಲಿ ಅಂಗನವಾಡಿ ಕಾರ್ಯಕರ್ತರು ದುಡಿದಿದ್ದಾರೆ. ಮನೆ ಮನೆಗೆ ಹೋಗಿ ಗರ್ಭಿಣಿಯರಿಗೆ, ಬಾಣಂತಿಯವರಿಗೆ ಆಹಾರ ಕೊಟ್ಟು ಬಂದಿದ್ದಾರೆ. ಸುಳ್ಳು ಆರೋಪ ಮಾಡಿ, ಜನರಿಗೆ ತಪ್ಪು ಸಂದೇಶ ಕೊಡಬೇಡಿ ಎಂದು ಹೇಳಿದರು.
ತಾನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಮಿತಿಯಲ್ಲಿದ್ದು, ತನಗೆ ಈ ಬಗ್ಗೆ ಅರಿವಿದೆ ಎಂದು ಹೇಳಿದರು. ಈ ವೇಳೆ ಶಾಸಕಿಯೊಬ್ಬರು ಉತ್ತರ ನೀಡಿದರೆಂಬ ಕಾರಣಕ್ಕೆ ಸದನದಲ್ಲಿ ಗದ್ದಲವಾಯಿತು. ಕಾಂಗ್ರೆಸ್ ಶಾಸಕ ಜಮೀರ್ ಅಹಮ್ಮದ್ ಖಾನ್, ಸಂಬಂಧಪಟ್ಟ ಮಂತ್ರಿಗಳು ಇದಕ್ಕೆ ಉತ್ತರ ಕೊಡಲಿ ಎಂದು ಹೇಳಿದಾಗ, ನೀವು ಸುಳ್ಳು ಯಾಕೆ ಹೇಳುತ್ತೀರಿ, ಇದು ಸರಿಯಾದುದ್ದಲ್ಲ ಎಂದು ರೂಪಾಲಿ ಎದಿರೇಟು ಕೊಟ್ಟರು.
ಇದನ್ನೂ ಓದಿ: ಹೈದರಾಬಾದ್ ಕರ್ನಾಟಕ ಭಾಗವನ್ನು ನಿರ್ಲಕ್ಷಿಸಿಲ್ಲ, ಅಭಿವೃದ್ಧಿ ಮಾಡಲಾಗುತ್ತಿದೆ: ಕೋಟಾ ಶ್ರೀನಿವಾಸ್ ಪೂಜಾರಿ
ಸದನದಲ್ಲಿ ರೂಪಾಲಿ ನಾಯ್ಕ ಪರ ಸಚಿವ ಅರವಿಂದ್ ಲಿಂಬಾವಳಿ ಧ್ವನಿ ಎತ್ತಿದಾಗ, ಕಾಂಗ್ರೆಸ್ ಶಾಸಕರು ಇದಕ್ಕೆ ವಿರೋಧ ವ್ಯಕ್ತಪಡಿಸಿದರು. ಈ ವೇಳೆ ಉಪಸಭಾಪತಿ ಆರಗ ಜ್ಞಾನೇಂದ್ರ, ಸದಸ್ಯರು ಸುಮ್ಮನಾಗುವಂತೆ ಮನವಿ ಮಾಡಿಕೊಂಡರು.