ಕಾರವಾರ: ಸುದೀರ್ಘ ರೆಸಾರ್ಟ್ ವಾಸ್ತವ್ಯದ ಬಳಿಕ ಕ್ಷೇತ್ರಕ್ಕೆ ಮರಳಿದ ಶಾಸಕ ದಿನಕರ ಶೆಟ್ಟಿ ಮಳೆಯಿಂದ ಹಾನಿಗೊಳಗಾಗಿ ಗಂಜಿ ಕೇಂದ್ರದಲ್ಲಿ ಆಶ್ರಯ ಪಡೆದಿರುವ ನೆರೆ ಸಂತ್ರಸ್ತರನ್ನು ಭೇಟಿ ಮಾಡಿ ಸಮಸ್ಯೆ ಆಲಿಸಿದರು.
ರಾಜ್ಯ ರಾಜಕಾರಣದ ಹೈಡ್ರಾಮಾದಲ್ಲಿ ರೆಸಾರ್ಟ್ ಸೇರಿದ್ದ ಶಾಸಕರು ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿ ಗಂಜಿ ಕೇಂದ್ರದಲ್ಲಿ ಆಶ್ರಯ ಪಡೆದ ಜನರಿಗೆ ಹಣ್ಣು ಹಂಪಲು ವಿತರಿಸಿದರು. ಇದೇ ವೇಳೆ, ಗಂಜಿ ಕೇಂದ್ರದಲ್ಲಿದ್ದ ಜನರು ಪ್ರತಿ ವರ್ಷ ಇದೇ ರೀತಿ ಸಮಸ್ಯೆಯಾಗುತ್ತಿದೆ. ಮಳೆಗಾಲ ಬಂದರೆ ಗಂಜಿಕೇಂದ್ರಕ್ಕೆ ತೆರಳಬೇಕು. ಇದಕ್ಕೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಶಾಸಕರಿಗೆ ಮನವಿ ಮಾಡಿದರು.
ಈ ಬಾರಿ ಸಮಸ್ಯೆ ಕೊನೆಯಾಗಬೇಕು. ಮುಂದಿನ ದಿನಗಳಲ್ಲಿ ಎಲ್ಲಿಯಾದರೂ ಮಳೆ ನೀರು ತುಂಬಿದಲ್ಲಿ ಎಂತಹ ಪರಿಸ್ಥಿತಿಯಲ್ಲಿಯೂ ಗಂಜಿ ಕೇಂದ್ರಕ್ಕೆ ಬರುವುದಿಲ್ಲ. ನಮ್ಮ ಮನೆಯಲ್ಲಿ ಎಷ್ಟೇ ನೀರು ಬಂದರೂ ನಾವು ಅಲ್ಲಿಯೇ ಇರುತ್ತೇವೆ ಎಂದು ಎಚ್ಚರಿಸಿದರು.
ಬಳಿಕ ಮಾತನಾಡಿದ ಶಾಸಕರು, ಇದು ಹಲವು ವರ್ಷಗಳಿಂದ ಇರುವ ಸಮಸ್ಯೆ ಇದಕ್ಕೆ ಶಾಸ್ವತ ಪರಿಹಾರ ಕಷ್ಟ, ಆದರೆ, ರಾಜಕಾಲುವೆ ಅಭಿವೃದ್ಧಿಪಡಿಸಲು ಸರ್ಕಾರಕ್ಕೆ ಪ್ರಸ್ತಾವ ಕಳುಹಿಸಲಾಗುವುದು. ಅಲ್ಲದೆ, ಈ ಭಾಗಕ್ಕೆ ಅವಶ್ಯವಿರುವ ರಸ್ತೆಯನ್ನು ಮಳೆಗಾಲ ಮುಗಿದ ಬಳಿಕ ಮಂಜೂರಿ ಮಾಡಿಕೊಡಲಾಗುವುದು ಎಂದು ಹೇಳಿದರು.