ಕಾರವಾರ: ಸಾಮಾನ್ಯವಾಗಿ ಬಾವಿಗಳಲ್ಲಿ ನೀರು ಸಿಗುವುದು ಸಹಜ. ಆದರೆ, ಅಂಕೋಲಾದ ಬಾವಿಯೊಂದರಲ್ಲಿ ಡೀಸೆಲ್ ಪತ್ತೆಯಾಗಿದ್ದು, ಇದೀಗ ಮನೆಯವರ ಆತಂಕಕ್ಕೆ ಕಾರಣವಾಗಿದೆ. ಅಂಕೋಲಾ ತಾಲೂಕಿನ ಮಠಾಕೇರಿ ಕ್ರಾಸ್ ಬಳಿ ಇಂತಹದೊಂದು ಘಟನೆ ಬೆಳಕಿಗೆ ಬಂದಿದೆ.
ಈ ಹಿಂದೆ ನೀರು ಇದ್ದು ಬಳಕೆಯಲ್ಲಿದ್ದ ಬಾವಿಯಲ್ಲಿಯೇ ಇದೀಗ ಡೀಸೆಲ್ ಕಂಡು ಬಂದಿದೆ. ಮಠಾಕೇರಿಯ ಗಣಪತಿ ಕಿಣಿ ಮತ್ತು ಸಂತೋಷ್ ನಾಯ್ಕರವರ ಮಾಲೀಕತ್ವದ 2 ಬಾವಿಗಳಲ್ಲಿ ಕುಡಿಯುವ ಶುದ್ಧ ನೀರು ದೊರೆಯುತ್ತಿತ್ತು. ಆದರೆ, ಕಳೆದ 3 ದಿನಗಳಿಂದ ಬಾವಿಯ ನೀರು ಡೀಸೆಲ್ ವಾಸನೆ ಬರಲಾರಂಭಿಸಿದೆ. ಅಲ್ಲದೇ ನೀರನ್ನು ಕುಡಿಯಲು ಸಹ ಆಗುತ್ತಿಲ್ಲ. ಹೀಗಾಗಿ ಬಾವಿಯ ಮಾಲಕರು ಪುರಸಭೆಗೆ ದೂರು ನೀಡಿದ್ದಾರೆ.
ಕಳೆದ ವರ್ಷವೂ ಪಟ್ಟಣದ ಒಂದು ಪೆಟ್ರೋಲ್ ಪಂಪ್ ನಿಂದ ಡೀಸೆಲ್ ಬಾವಿಗೆ ಸೇರಿ ನೀರು ಕುಡಿಯಲು ಸಾಧ್ಯವಾಗದಂತಾಗಿತ್ತು. ಈಗ ಮತ್ತೆ ಮಠಾಕೇರಿ ಬಾವಿಯಲ್ಲಿ ಇದೇ ಸಮಸ್ಯೆ ಎದುರಾಗಿದೆ. ಸಮೀಪದ ಡೀಸೆಲ್ ಪಂಪ್ ನಿಂದ ಈ ಡೀಸೆಲ್ ಬಂದಿರುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ.
ಸ್ಥಳಕ್ಕೆ ಪುರಸಭಾ ಮುಖ್ಯಾಧಿಕಾರಿ ಎನ್.ಎಮ್.ಮೆಸ್ತಾ, ಆಹಾರ ನೀರಿಕ್ಷಕ ನವೀನ ನಾಯ್ಕ್, ಪುರಸಭಾ ನೀರು ಸರಬರಾಜು ಅಧಿಕಾರಿ ಆನಂದು ನಾಯ್ಕ್ ಭೇಟಿ ನೀಡಿ ಬಾವಿಯನ್ನು ಪರೀಕ್ಷಿಸಿದ್ದಾರೆ. ನೀರನ್ನು ಪರೀಕ್ಷೆಗಾಗಿ ಸಂಬಂಧಿಸಿದ ಇಲಾಖೆಗೆ ಕಳುಹಿಸಿದ್ದಾರೆ. ಎಲ್ಲಿಂದ ಈ ಡೀಸೆಲ್ ಬರುತ್ತಿದೆ ಎನ್ನುವುದನ್ನು ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಲು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಇದನ್ನೂ ಓದಿ:ಬಂಡೀಪುರದಲ್ಲಿ ಪ್ರವಾಸಿಗರ ಮನಗೆದ್ದ ಮರಿ ಹುಲಿ.. ವಿಡಿಯೋ ವೈರಲ್