ಕಾರವಾರ(ಉತ್ತರ ಕನ್ನಡ): ಬಿಸಿ ಎಣ್ಣೆ ಅಂದ್ರೆ ಯಾರಿಗೆ ಭಯ ಆಗೋದಿಲ್ಲ ಹೇಳಿ. ಅಂತಹದರಲ್ಲಿ ಕುದಿಯುವ ಎಣ್ಣೆಯೊಳಗೆ ಕೈ ಹಾಕಿ ಬೇಯುತ್ತಿರುವ ವಡೆಗಳನ್ನು ಭಕ್ತರು ಬರಿಗೈನಲ್ಲಿ ತೆಗೆಯುವ ಮೂಲಕ ಅಚ್ಚರಿ ಮೂಡಿಸಿದ ಘಟನೆ ಉತ್ತರಕನ್ನಡ ಜಿಲ್ಲೆಯ ಕುಮಟಾ ಪಟ್ಟಣದ ಕಾಮಾಕ್ಷಿ ದೇವಾಲಯದಲ್ಲಿ ನಡೆಯಿತು. ಪ್ರತಿ ವರ್ಷ ಅಶ್ವಿನಿ ಮಾಸದ ಹುಣ್ಣಿಮೆ ದಿನದಂದು ನಡೆಯುವ ಉತ್ಸವದಲ್ಲಿ ಈ ಸಂಪ್ರದಾಯ ನಡೆಸಿಕೊಂಡು ಬರಲಾಗಿದೆ.
ಮೂಲತಃ ಗುವಾಹಟಿಯ ಕಾಮಾಕ್ಷಿ ದೇವರು ಕುಮಟಾಕ್ಕೆ ಬಂದು ನೆಲೆಸಿದ ನಂತರ ಕಳೆದ ಹಲವಾರು ವರ್ಷಗಳಿಂದ ಅಶ್ವಿನಿ ಮಾಸದ ಹುಣ್ಣಿಮೆಯಂದು ಜಾತ್ರೆ ನಡೆಯುತ್ತದೆ. ದೇವಸ್ಥಾನದಲ್ಲಿ 15 ದಿನಗಳ ಕಾಲ ನವರಾತ್ರಿ ಉತ್ಸವ ಆಚರಿಸಿದ ಬಳಿಕ ಹುಣ್ಣಿಮೆಯಂದು ಈ ಉತ್ಸವ ಮುಕ್ತಾಯವಾಗುವ ಹಿನ್ನೆಲೆ ಜಾತ್ರೆ ಮಾಡಲಾಗುತ್ತದೆ. ಬಾಣಲೆಯಲ್ಲಿ ಕುದಿಯುತ್ತಿರುವ ಎಣ್ಣೆಯಲ್ಲಿ ಕೈ ಹಾಕಿ ವಡೆಯನ್ನು ಭಕ್ತರು ತೆಗೆಯೋದು ಕಾಮಾಕ್ಷಿ ದೇವರ ಜಾತ್ರೆಯ ವಿಶೇಷ. ಈ ಜಾತ್ರೆಯನ್ನು ಸಾಂಪ್ರದಾಯಿಕ ಭಾಷೆಯಲ್ಲಿ ವಡೆ ಹುಣ್ಣಿಮೆ ಜಾತ್ರೆ ಅಂತಾ ಸಹ ಕರೆಯುತ್ತಾರೆ. ಪ್ರತಿ ವರ್ಷದಂತೆ ಈ ಬಾರಿ ಸಹ ನಿನ್ನೆ ಅದ್ಧೂರಿಯಾಗಿ ಜಾತ್ರೆ ನಡೆಯಿತು. ವಿವಿಧ ಭಾಗಗಳಿಂದ ಜಾತ್ರೆಗೆ ಆಗಮಿಸಿದ ಸಾಕಷ್ಟು ಭಕ್ತರು ಕುದಿಯುವ ಎಣ್ಣೆಯಲ್ಲಿ ಕೈ ಹಾಕಿ ವಡೆ ತೆಗೆದರು.
ಕುಮಟಾ ಪಟ್ಟಣದ ಗುಜರಗಲ್ಲಿಯಲ್ಲಿರುವ ಕಾಮಾಕ್ಷಿ ದೇವರ ಜಾತ್ರೆಗೆ ಸಾವಿರಾರು ಭಕ್ತರು ಆಗಮಿಸುತ್ತಾರೆ. ಕೇವಲ ರಾಜ್ಯದಿಂದ ಮಾತ್ರವಲ್ಲದೇ ಗೋವಾ, ಮಹಾರಾಷ್ಟ್ರ, ಮುಂಬೈನಿಂದಲೂ ಭಕ್ತರು ಆಗಮಿಸುತ್ತಾರೆ. ಜಾತ್ರೆ ಸಮಯದಲ್ಲಿ ಕುದಿಯುತ್ತಿರುವ ಎಣ್ಣೆಯಲ್ಲಿ ವಡೆ ತೆಗೆಯುತ್ತೇನೆ ಎಂದು ಹರಕೆ ಹೊತ್ತುಕೊಂಡ್ರೆ ಭಕ್ತರ ಇಷ್ಟಾರ್ಥ ಸಿದ್ಧಿಯಾಗುತ್ತೆ ಎಂಬುದು ಇಲ್ಲಿಗೆ ಆಗಮಿಸುವ ಭಕ್ತರ ಅಭಿಪ್ರಾಯ.
ಈ ಹಿನ್ನೆಲೆ ಹರಕೆ ಈಡೇರಿದ ಭಕ್ತರು ಕುದಿಯುವ ಎಣ್ಣೆಯಲ್ಲಿ ವಡೆಗಳನ್ನು ತೆಗೆದರು. ಹರಕೆ ತೀರಿಸುವ ಮುನ್ನ ಭಕ್ತರು 15 ದಿನ ದೇವರಿಗೆ ಸೇವೆ ಮಾಡುತ್ತಾರೆ. ಇದಲ್ಲದೇ, ವಡೆ ತೆಗೆಯುವ ಮೂರು ದಿನ ಮುಂಚಿತ ಮಾಂಸಹಾರ ಸೇವನೆಯನ್ನ ಬಿಡುತ್ತಾರೆ. ಜಾತ್ರೆ ನಡೆಯುವ ದಿನ ಬೆಳಗ್ಗೆಯೇ ದೇವಸ್ಥಾನ ಆವರಣದಲ್ಲಿ ತೀರ್ಥಸ್ನಾನ ಮಾಡಿ ನಂತರ ದೇವಾಲಯದ ಅರ್ಚಕರಿಂದ ತೀರ್ಥವನ್ನು ಪಡೆದು ಎಣ್ಣೆಯಲ್ಲಿ ವಡೆಯನ್ನು ತೆಗೆಯುತ್ತಾರೆ. ಕುದಿಯುವ ಎಣ್ಣೆಯಲ್ಲಿ ಭಕ್ತಿಯಿಂದ ವಡೆ ತೆಗೆಯುವುದರಿಂದ ಯಾವ ಸುಟ್ಟಗಾಯಗಳು ಆಗುವುದಿಲ್ಲ. ಇದು ದೇವರ ಮೇಲಿರುವ ನಂಬಿಕೆ ಅಂತಾರೇ ಇಲ್ಲಿನ ಭಕ್ತರು.
ಇದನ್ನೂ ಓದಿ: ಕುಮಟಾ ಕಾಮಾಕ್ಷಿ ಸನ್ನಿಧಿಯಲ್ಲಿ ಭಕ್ತಿ ಪರಾಕಾಷ್ಠೆ: ಕುದಿಯುವ ಎಣ್ಣೆಯಿಂದ ವಡೆ ತೆಗೆಯುವ ಭಕ್ತರು
ಇನ್ನು, ಇದೇ ದಿನ ಪಟ್ಟಣದ ಶಾಂತೇರಿ ಕಾಮಾಕ್ಷಿ, ರಾಮನಾಥ ಲಕ್ಷ್ಮೀನಾರಾಯಣ ದೇವಾಲಯದಲ್ಲೂ ಸಹ ಭಕ್ತರು ಎಣ್ಣೆಯಲ್ಲಿ ವಡೆಯನ್ನು ತೆಗೆಯುವ ಮೂಲಕ ದೇವರ ಹರಕೆಯನ್ನ ತೀರಿಸುತ್ತಾರೆ. ಒಟ್ಟಿನಲ್ಲಿ ಕುದಿಯುತ್ತಿರುವ ಎಣ್ಣೆಗೆ ಕೈ ಹಾಕಿದರೂ ಏನೂ ಆಗದೇ ಇರುವುದು ದೇವರ ಪವಾಡವೇ ಸರಿ.